ದುಬೈ : ಭಾರತ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ನ್ಯೂಜಿಲ್ಯಾಂಡ್ ಆಲ್ರೌಂಡರ್ ಕೈಲ್ ಜೇಮಿಸನ್ ಹಾಗೂ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಐಸಿಸಿ 2021ರ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಭಾರತ ತಂಡದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ರವಿಚಂದ್ರನ್ ಅಶ್ವಿನ್ 2021ರಲ್ಲಿ ಅದ್ಭುತ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಭಾರತೀಯ ಸ್ಪಿನ್ನರ್ 2021ರಲ್ಲಿ ಆಡಿರುವ 8 ಪಂದ್ಯಗಳಿಂದ 52 ವಿಕೆಟ್ ಮತ್ತು 337 ರನ್ಗಳಿಸಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 15 ಪಂದ್ಯಗಳಲ್ಲಿ 6 ಶತಕ ಸಹಿತ 1708 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜೋ ರೂಟ್ 1700ರ ಗಡಿ ದಾಟಿದ 3ನೇ ಬ್ಯಾಟರ್ ಆಗಿದ್ದಾರೆ.
ಕೈಲ್ ಜೇಮಿಸನ್ 5 ಪಂದ್ಯಗಳಿಂದ 27 ವಿಕೆಟ್ ಪಡೆಯುವ ಮೂಲಕ 2021ರ ವಿಶ್ವಾಸಾರ್ಹ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ 7 ವಿಕೆಟ್ ಪಡೆದು ಭಾರತದೆದುರು ಗೆಲ್ಲಲು ಕಿವೀಸ್ಗೆ ಜೇಮಿಸನ್ ಕಾರಣರಾಗಿದ್ದರು. ಇತ್ತ ಶ್ರೀಲಂಕಾದ ನಾಯಕ ದಿಮುತ್ ಕರುಣರತ್ನೆ 4 ಶತಕಗಳ ಸಹಿತ 69.38ರ ಸರಾಸರಿಯಲ್ಲಿ 902 ರನ್ಗಳಿಸಿದ್ದಾರೆ.
ಇದನ್ನೂ ಓದಿ:India vs SA ಟೆಸ್ಟ್: ಎಂಗಿಡಿ, ರಬಾಡ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 327ಕ್ಕೆ ಆಲೌಟ್