ಲಂಡನ್: ಕೊರೊನಾ ವೈರಸ್ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮೂಂದುಡಲಾಗಿದೆ. ಟೂರ್ನಿಯನ್ನು ಮುಂದುವರೆಸಲು ಬಿಸಿಸಿಐ ಸೂಕ್ತ ಸಮಯ ಹಾಗೂ ಸ್ಥಳಕ್ಕಾಗಿ ಹುಡುಕಾಟ ನಡೆಸಿದೆ. ಆದರೆ ಇದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ನಿರ್ವಾಹಕ ನಿರ್ದೇಶಕ ಆಶ್ಲೇ ಗಿಲ್ಸ್ ಪ್ರತಿಕ್ರಿಯಿಸಿದ್ದು, ಬಿಸಿಸಿಐಗೆ ಶಾಕ್ ನೀಡಿದ್ದಾರೆ.
ಐಪಿಎಲ್ ಪುನಾರಂಭವಾದರೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೇಂದ್ರೀಯ ಗುತ್ತಿಗೆಯನ್ನು ಪಡೆದ ಆಟಗಾರರು ಭಾಗಿಯಾಗುವುದು ಅಸಾಧ್ಯ ಎಂದು ಆಶ್ಲೇ ಗಿಲ್ಸ್ ಹೇಳಿದ್ದಾರೆ. ಹೀಗಾಗಿ ನಾಯಕ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಜಾನಿ ಬೈರ್ಸ್ಟೋ, ಜೇಸನ್ ರಾಯ್ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಇಲ್ಲದೆಯೇ ಐಪಿಎಲ್ 14ನೇ ಆವೃತ್ತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ ಬಿಡುವಿಲ್ಲದಂತೆ ದ್ವಿಪಕ್ಷೀಯ ಸರಣಿಗಳು ನಿರ್ಧಾರವಾಗಿವೆ. ಹೀಗಾಗಿ ಐಪಿಎಲ್ ಮುಂದುವರಿದ ಭಾಗದ ಆಯೋಜನೆ ಅಂತಾರಾಷ್ಟ್ರೀಯ ವೇಳಾಪಟ್ಟಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಂಗ್ಲೆಂಡ್ ಆಟಗಾರರ ಅಲಭ್ಯತೆಯ ಬಗ್ಗೆ ಆಶ್ಲೇ ಗಿಲ್ಸ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮುಂದುವರಿದ ಭಾಗದ ಆಯೋಜನೆಯ ಸಮಯ ಹಾಗೂ ಸ್ಥಳವನ್ನ ಈಗ ನಿರ್ಧರಿಸುವುದು ಅಸಾಧ್ಯವೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಆದರೂ ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಟಿ-20 ವಿಶ್ವಕಪ್‌ಗೂ ಮುನ್ನ ಸಿಗುವ ಕಾಲಾವಕಾಶದಲ್ಲಿ ನಡೆಸುವ ಸಾಧ್ಯತೆಯ ಸುಳಿವು ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಲಿದೆ.
"ಇಂಗ್ಲೆಂಡ್ ಪಂದ್ಯಗಳಲ್ಲಿ ಇಂಗ್ಲೆಂಡ್ ಆಟಗಾರರ ಪಾಲ್ಗೊಳ್ಳುವಿಕೆಯ ಕುರಿತು ನಾವು ಯೋಜಿಸುತ್ತಿದ್ದೇವೆ. ನಮಗೆ ಪೂರ್ಣ ಎಫ್‌ಟಿಪಿ ವೇಳಾಪಟ್ಟಿ ಸಿಕ್ಕಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ. ಆಟಗಾರರು ಅಲ್ಲಿದ್ದರೆ ಐಪಿಎಲ್ ಆಡುವುದು ಅಸಾಧ್ಯ " ಎಂದು ಆಶ್ಲೇ ಗಿಲ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದವ ಈಗ ಬಂಗಾಳದ ಕ್ರೀಡಾ ಸಚಿವ