ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡ ತೊರೆಯಲು ಸಿದ್ಧರಾಗಿದ್ದಾರೆ. ಮುಂಬೈ ಕ್ರಿಕೆಟ್ ಬೋರ್ಡ್ನಿಂದ ನಿರಾಪೇಕ್ಷಣಾ ಪ್ರಮಾಣಪತ್ರಕ್ಕೆ (ಎನ್‌ಒಸಿ) ಅರ್ಜಿ ಸಲ್ಲಿಕೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಭಾಗವಾಗಿರುವ 22ರ ಎಡಗೈ ವೇಗಿ ಕಳೆದ ಎರಡು ಆವೃತ್ತಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಿಲ್ಲ. 2020-21ರ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಮತ್ತು ಪುದುಚೇರಿ ವಿರುದ್ಧ ಕಣಕ್ಕಿಳಿದಿದ್ದರು.
ಮುಂಬೈ ತಂಡದಲ್ಲಿ ಹೆಚ್ಚು ಅವಕಾಶ ಸಿಗದ ಕಾರಣ ಸದ್ಯ ಮುಂಬೈ ತಂಡ ತೊರೆಯಲು ನಿರ್ಧರಿಸಿದ್ದು, ಎನ್‌ಒಸಿ ಪಡೆದುಕೊಂಡ ಬಳಿಕ ಮುಂದಿನ ದೇಶೀಯ ಋತುವಿನಲ್ಲಿ ಗೋವಾ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ವೃತ್ತಿಜೀವನದ ಪ್ರಮುಖ ಹಂತದಲ್ಲಿರುವ ಅರ್ಜುನ್ ತೆಂಡೂಲ್ಕರ್ ಹೆಚ್ಚಿನ ಪಂದ್ಯಗಳಲ್ಲಿ ಕಣಕ್ಕಿಳಿದು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ. ಆದರೆ, ಮುಂಬೈ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: IPLನಲ್ಲಿ ಅರ್ಜುನ್ಗೆ ಸಿಗದ ಚಾನ್ಸ್.. ನಿಜವಾದ ಕಾರಣ ಹೊರಹಾಕಿದ ಕೋಚ್ ಶೇನ್ ಬಾಂಡ್!
ಗೋವಾ ಕ್ರಿಕೆಟ್ ಅಸೋಸಿಯೇಷನ್ ಸದ್ಯ ಎಡಗೈ ಬೌಲರ್ ಹುಡುಕಾಟದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಆಟಗಾರನಿಗೂ ಮಣೆ ಹಾಕಲು ಮುಂದಾಗಿದೆ. ಈ ಎರಡು ಕೌಶಲ್ಯ ಅರ್ಜುನ್ ತೆಂಡೂಲ್ಕರ್ ಬಳಿ ಇರುವ ಕಾರಣ ಅವರಿಗೆ ಗೋವಾ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಪುತ್ರ ರೋಹನ್ ಈ ಹಿಂದೆ ಮುಂಬೈ ಬಿಟ್ಟು ಪಶ್ಚಿಮ ಬಂಗಾಳ ಪರ ಆಡಿದ್ದರು. ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸಾದುದ್ದೀನ್ ಕೂಡ 2018ರಲ್ಲಿ ಗೋವಾ ಪರ ರಣಜಿ ಟ್ರೋಫಿ ಆಡಿದ್ದಾರೆ.