ನವದೆಹಲಿ: ಭಾರತದ ಪ್ರಸಿದ್ಧ ಟಾಟಾ ಗ್ರೂಪ್ ಐಪಿಎಲ್ನ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪ್ರತಿಷ್ಠಿತ ಸಂಸ್ಥೆಯ ಜೊತೆಯಲ್ಲಿ ಭಾರತೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮುಂಬರುವ 2 ಆವೃತ್ತಿಗಳಿಗೆ ಟಾಟಾ ಸಮೂಹ ಸಂಸ್ಥೆಯು ಇಂಡಿಯನ್ ಪ್ರೀಮಿಯರ್ ಲೀಗ್ನ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಪಡೆದುಕೊಂಡ ಬೆನ್ನಲ್ಲೇ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ಇದು ನಿಜಕ್ಕೂ ಬಿಸಿಸಿಐ ಐಪಿಎಲ್‌ಗೆ ಮಹತ್ವದ ಕ್ಷಣ. ಏಕೆಂದರೆ ಟಾಟಾ ಗ್ರೂಪ್ ಜಾಗತಿಕ ಭಾರತೀಯ ಉದ್ಯಮ ಸಂಸ್ಥೆಯಾಗಿದ್ದು, 100 ವರ್ಷಗಳಷ್ಟು ಹಳೆಯದಾದ ಪರಂಪರೆ ಮತ್ತು ಆರು ಖಂಡಗಳಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ಹೊಂದಿದೆ. ಟಾಟಾ ಗ್ರೂಪ್‌ನಂತಹ ಬೃಹತ್ ಸಂಸ್ಥೆ ಅಂತಾರಾಷ್ಟ್ರೀಯ ಗಡಿಗಳಲ್ಲಿ ಕ್ರಿಕೆಟ್ ಬಗೆಗಿನ ಉತ್ಸಾಹವನ್ನು ಉತ್ತೇಜಿಸಲು ಮತ್ತು ವಿಶ್ವ ಮಟ್ಟದಲ್ಲಿ ಕ್ರೀಡಾ ಫ್ರಾಂಚೈಸಿಯಾಗಿ ಐಪಿಎಲ್ ಜನಪ್ರಿಯತೆಯನ್ನು ಹೆಚ್ಚಿಸಲು ಬಯಸುತ್ತಿರುವುದು ಸಂತಸ ತಂದಿದೆ" ಎಂದು ತಿಳಿಸಿದ್ದಾರೆ.
ಭಾರತದ ಬೃಹತ್ ಮತ್ತು ಅತ್ಯಂತ ನಂಬಿಕಾರ್ಹ ವಾಣಿಜ್ಯ ಸಮೂಹ ಸಂಸ್ಥೆ ಐಪಿಎಲ್ನ ಬೆಳವಣಿಗೆಯ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ನಮಗೆ ತುಂಬಾ ಸಂತೋಷ ತಂದಿದೆ. ಟಾಟಾ ಗ್ರೂಪ್ನ ಜೊತೆಯಾಗಿ ನಾವು ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇವೆ ಎಂದು ಜಯ್ ಶಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್