ಆಂಟಿಗುವಾ : ದೇಶದ ಆಡಳಿತ ತಾಲಿಬಾನ್ ಕೈವಶವಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನವಾಗಿದ್ದ ಆಫ್ಘಾನಿಸ್ತಾನ ತಂಡ ತಡವಾಗಿ ಕೆರಿಬಿಯನ್ ಪ್ರವೇಶಿಸಿತ್ತು. ನಂತರ ಐಸಿಸಿ ಅಪೆಕ್ಸ್ ಮಂಡಳಿ ವೇಳಾಪಟ್ಟಿಯನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು. ಇದೀಗ ಆಫ್ಘಾನ್ ತಂಡ ಸೆಮಿಫೈನಲ್ ಪ್ರವೇಶಿಸಿ ಐಸಿಸಿ ಶ್ರಮಕ್ಕೆ ಪ್ರತಿಫಲ ತಂದುಕೊಟ್ಟಿದೆ.
ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಒಗ್ಗಿಕೊಂಡಿರುವ ಆಫ್ಘಾನಿಸ್ತಾನ ತಂಡವು ಮಂಗಳವಾರ ಇತಿಹಾಸವನ್ನು ನಿರ್ಮಿಸಲು ಕಾಯುತ್ತಿದೆ. ಅವರ ಈ ಪ್ರಯತ್ನದಿಂದ ದೇಶದ ಕ್ರೀಡೆಗಷ್ಟೇ ಅಲ್ಲ ಆಂತರಿಕ ಸಮಸ್ಯೆಗಳಿಂದ ಜರ್ಜರಿತವಾಗಿರುವ ಅನೇಕ ಆತ್ಮಗಳಿಗೆ ಸ್ವಲ್ಪ ಮುಲಾಮು ಹಚ್ಚಿದಂತಾಗಲಿದೆ. ಆಫ್ಘಾನಿಸ್ತಾನ ಅಂಡರ್-19 ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸರ್ ವಿವಿಯನ್ ರಿಚರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ನಲ್ಲಿ ಕಾದಾಡಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವೀಸಾ ಸಮಸ್ಯೆಯಿಂದ ಟೂರ್ನಿಗೆ ತಡವಾಗಿ ಪ್ರವೇಶಿಸಿದರೂ ಲೀಗ್ನಲ್ಲಿ ಉತ್ತಮ ಪ್ರದರ್ಶನ ತೋರಿ ಎಲ್ಲಾ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಫ್ಘಾನ್ ತಂಡ 8ರ ಘಟ್ಟದಲ್ಲಿ ಶ್ರೀಲಂಕಾ ವಿರುದ್ಧ ಕೇವಲ 134 ರನ್ಗಳಿಗೆ ಆಲೌಟ್ ಆಗಿತ್ತು.
ಟೂರ್ನಿಯಲ್ಲಿ ಬಲಿಷ್ಠವಾಗಿದ್ದ ಶ್ರೀಲಂಕಾ ತಂಡ ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಛಲಬಿಡದ ಆಫ್ಘಾನ್ ತಂಡ ಲಂಕಾ ತಂಡವನ್ನು 130ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ 4 ರನ್ಗಳ ಜಯದೊಂದಿದೆ ಸೆಮಿಫೈನಲ್ ಪ್ರವೇಶ ಪಡೆಯಿತು.
2018ರಲ್ಲಿ ನ್ಯೂಜಿಲ್ಯಾಂಡ್ನಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಆಫ್ಘಾನ್ ಆಸ್ಟ್ರೇಲಿಯಾಗೆ ಸುಲಭ ತುತ್ತಾಗಿತ್ತು. ಇದೀಗ ಆಫ್ಘಾನಿಸ್ತಾನ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸುವ ದೊಡ್ಡ ಸವಾಲು ಎದುರಾಗಿದೆ.
ಇತ್ತ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುಲಭ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ. ಆಫ್ಘಾನಿಸ್ತಾನ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಆಂಗ್ಲ ತಂಡ 1998ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದು ಬಿಟ್ಟರೆ ಈವರೆಗೆ ಒಮ್ಮೆಯೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ.