ಕೋಲ್ಕತ್ತಾ(ಪಶ್ಚಿಮ ಬಂಗಾಳ) : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬಳಿಕ ಇದೀಗ ಅವರ ಪುತ್ರಿ ಸನಾ ಸೇರಿದಂತೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್(ಸಿಎಬಿ)ನ ಅಧಿಕಾರಿಗಳು ಹಾಗೂ ಗಂಗೂಲಿ ಅವರ ಕುಟುಂಬದ ಸದಸ್ಯರು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ಜ್ವರ ಹಾಗೂ ಕೆಮ್ಮು ಕಾಣಿಸಿರುವ ಕಾರಣ ಎಲ್ಲರಿಗೂ ಕೊರೊನಾ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ಖಚಿತಗೊಂಡಿದೆ.
ಸೌರವ್ ಗಂಗೂಲಿ ಅವರ ಚಿಕ್ಕಪ್ಪ ಹಾಗೂ ಸಿಎಬಿ ಖಜಾಂಚಿ ಆಗಿರುವ ದೇಬಾಶಿಶ್ ಗಂಗೂಲಿ ಅವರಿಗೂ ಕೊರೊನಾ ಸೋಂಕು ದೃಢಗೊಂಡಿದೆ. ಇವರ ಜೊತೆಗೆ ಬಂಗಾಳದ ರಣಜಿಯ ಮಾಜಿ ಕ್ರಿಕೆಟ್ ಆಟಗಾರ ಸುವದೀಪ್ ಗಂಗೂಲಿ ಹಾಗೂ ಅವರ ಪತ್ನಿ ಜೂಯಿ ಗಂಗೂಲಿಗೂ ಸೋಂಕು ಖಚಿತಗೊಂಡಿದೆ. ಇದರ ಮಧ್ಯೆ ಗಂಗೂಲಿ ಅವರ ಸಹೋದರ ಸ್ನೇಹಶಶಿ ಹಾಗೂ ಅವರ ಪತ್ನಿಗೂ ಕೋವಿಡ್ ದೃಢಗೊಂಡಿದೆ.
ಸೋಂಕು ದೃಢಗೊಳ್ಳುತ್ತಿದ್ದಂತೆ ಎಲ್ಲರೂ ಐಸೋಲೇಷನ್ಗೊಳಗಾಗಿದ್ದಾರೆ. ಸ್ವಲ್ಪಮಟ್ಟದ ಜ್ವರ ಹಾಗೂ ಕೆಮ್ಮು ಕಾಣಿಸಿದೆ ಎಂದು ತಿಳಿದು ಬಂದಿದೆ. ಇವರೆಲ್ಲರ ಮೇಲೂ ಕೋಲ್ಕತ್ತಾದ ಖಾಸಗಿ ಆಸ್ಪತ್ರೆ ವೈದ್ಯರು ನಿಗಾ ಇಟ್ಟಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿಗೊಳಗಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಇದನ್ನೂ ಓದಿ: ಕೊರೊನಾದಿಂದ ಗುಣಮುಖ.. ಒಮಿಕ್ರಾನ್ ವರದಿಯೂ ನೆಗೆಟಿವ್.. ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್