ಹೈದರಾಬಾದ್: 2007ರ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸಾಧನೆ ತೆರೆಯ ಮೇಲೆ ತರುವ ಕಸರತ್ತು ನಡೆದಿದೆ. ಇತ್ತೀಚಿಗೆ ಕ್ರೀಡಾಪಟುಗಳ ಬಯೋಪಿಕ್ಗಳು ತೆರೆಗೆ ತರುವುದು ಹೊಸ ಟ್ರೆಂಡ್ ಆಗಿದೆ. ಈ ಪಟ್ಟಿಗೆ ಇದೀಗ 2007ರ ಟಿ20 ವಿಶ್ವಕಪ್ ಕೂಡ ಸೇರ್ಪಡೆಗೊಳ್ಳಲಿದೆ. ಇದು ಕ್ರೀಡಾಭಿಮಾನಿಗಳ ಮನದಲ್ಲಿ ಅಳಿಸಲಾಯದ ಘಟನೆ. ಮತ್ತೆ ತೆರೆಯ ಮೇಲೆ ಬರುವ ಸುದ್ದಿ ಕೇಳಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
2007ರ ಟಿ20 ವಿಶ್ವಕಪ್ ಘಟನಾವಳಿಗಳು ಡಾಕ್ಯುಮೆಂಟರಿ ವೆಬ್ ಸಿರೀಸ್ ರೂಪದಲ್ಲಿ ತೆರೆಗೆ ತರಲಿದೆ ಎಂದು ಹೇಳಲಾಗುತ್ತಿದೆ. ಯುಕೆ ಮೂಲದ ಒನ್ ಒನ್ ಸಿಕ್ಸ್ ನೆಟ್‌ವರ್ಕ್ ಇದನ್ನು ತಯಾರಿಸುತ್ತಿದೆ. ಆನಂದ್ ಕುಮಾರ್ ನಿರ್ದೇಶನ ಮಾಡಲಿದ್ದು, ಈ ಮೆಗಾ ಸರಣಿಯು ಹಲವು ಭಾಷೆಗಳಲ್ಲಿ ಸಾಕ್ಷ್ಯಚಿತ್ರವಾಗಿ ಕಾಣಿಸಿಕೊಳ್ಳಲಿದೆಯಂತೆ.
ಅಂದಿನ ತಂಡದ 15 ಆಟಗಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಈಗಾಗಲೇ ಚಿತ್ರೀಕರಣ ಮುಗಿದಿದೆ. ಆದರೆ, ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಈ ವೆಬ್ ಡಾಕ್ಯುಮೆಂಟರಿ ಸರಣಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ತಯಾರಕರು ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜ ಆಟಗಾರರಿಲ್ಲದೆ, ಅನನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವ ಟೀಂ ಇಂಡಿಯಾ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಬಲಿಷ್ಠ ತಂಡಗಳಾಗಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳನ್ನು ಸೋಲಿಸಿದ್ದಲ್ಲದೆ, ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.
ಜೋಗಿಂದರ್ ಅವರ ಮೊನಚಾದ ಕೊನೆಯ ಬೌಲ್, ಶ್ರೀಶಾಂತ್ ಹಿಡಿದ ಮರೆಯಲಾಗದ ಕ್ಯಾಚ್, ಕಷ್ಟಕರ ಸಂದರ್ಭಗಳಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕ ಧೋನಿ, ಇಂಗ್ಲೆಂಡ್ ತಂಡದ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದ ಯುವರಾಜ್ ಅವರ ಪರಾಕ್ರಮ ಇವತ್ತಿಗೂ ಕ್ರೀಡಾಪ್ರೇಮಿಗಳಿಗೆ ಪುಳಕ. ಹಾಗಾಗಿ ಸಹಜವಾಗಿ ಕಾತರತೆ ಹೆಚ್ಚಾಗಿದೆ.
2016ರಲ್ಲಿ 'ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ಎಂಬ ಹೆಸರಿನಲ್ಲಿ ಧೋನಿ ಅವರ ಬಯೋಪಿಗ್ ಬಿಡುಗಡೆಯಾಯಿತು. ಬಳಿಕ ಮೊಹಮ್ಮದ್ ಅಜರುದ್ದೀನ್ ಅವರ 'ಅಜರ್', ಸಚಿನ್ ಅವರ 'ಸಚಿನ್ : ಎ ಬಿಲಿಯನ್ ಡ್ರೀಮ್', ಕಪಿಲ್ ದೇವ್ ಅವರ '83' ಸೇರಿದಂತೆ ಹತ್ತು ಹಲವು ಕ್ರೀಡಾ ತಾರೆಯರ ಬಯೋಪಿಕ್ಗಳು ಬಂದಿದೆ. ಈ ಸಾಲಿಗೆ 2007ರ ಟಿ20 ವಿಶ್ವಕಪ್ ಕೂಡ ಸೇರ್ಪಡೆಗೊಳ್ಳಲಿದೆ.
ಇದನ್ನೂ ಓದಿ: NZ vs IND T20I: ನ್ಯೂಜಿಲೆಂಡ್-ಭಾರತ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದು