ಬಾಸೆಲ್(ಸ್ವಿಟ್ಜರ್ಲ್ಯಾಂಡ್): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಘಟಾನುಘಟಿಳಿಗೆ ಮಣ್ಣು ಮುಕ್ಕಿಸಿದ್ದ ಸಾತಿ ಪ್ರಣೀತ್ ನಂಬರ್ 1 ಶ್ರೇಯಾಂಕದ ಮೊಮೊಟೋ ವಿರುದ್ಧ ಸೋಲನುಭವಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ನಲ್ಲಿ ಬಿ ಸಾಯಿ ಪ್ರಣೀತ್ ಜಪಾನ್ನ ಕೆಂಟೊ ಮೊಮೊಟೊ ವಿರುದ್ಧ 13-21, 8-21 ಗೇಮ್ಗಳಿಂದ ಸುಲಭವಾಗಿ ಸೋಲನುಭವಿಸಿದರು. ಆದರೂ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಯಿ ಪ್ರಣೀತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಪದಕ ಗೆದ್ದ 2ನೇ ಭಾರತೀಯ ಎನಿಸಿಕೊಂಡರು. 1983 ರಲ್ಲಿ ಪ್ರಕಾಶ್ ಪಡುಕೋಣೆ ಮೊದಲ ಬಾರಿಗೆ ಕಂಚು ಗೆದ್ದಿದ್ದರು.
ಪಂದ್ಯದ ನಂತರ ಮಾತನಾಡಿದ ಪ್ರಣೀತ್, ಈ ಟೂರ್ನಿ ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮವಾದದ್ದಾಗಿದೆ. ಇಲ್ಲಿ ತುಂಬಾ ಕಲಿತಿದ್ದೇನೆ, ಈ ಸೋಲನ್ನು ಕೂಡ ಧನಾತ್ಮವಾಗಿ ಸ್ವೀಕರಿಸುತ್ತೇನೆ. ಪ್ರಸ್ತುತ ನನ್ನ ಪ್ರದರ್ಶನ ಉತ್ತಮವಾಗಿದ್ದು, ಅದನ್ನು ಮುಂದುವರಿಸುತ್ತೇನೆ ಎಂದು ಪ್ರಣೀತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಣೀತ್ ಈ ಟೂರ್ನಿಗೂ ಮೊದಲು ನಡೆದಿದ್ದ ಸ್ವಿಸ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ನಂಬರ್ ಒನ್ ಮೊಮೊಟೋ ವಿರುದ್ಧ ಒತ್ತಡಕ್ಕೊಳಗಾದ ಪ್ರಣೀತ್ ಕೆಲವು ಶಾಟ್ಗಳನ್ನು ಅಂಗಳದಿಂದ ಹೊರಕ್ಕೆ ಹೊಡೆದು ಅಂಕ ಕಳೆದುಕೊಂಡು ಎದುರಾಳಿಗೆ ಸುಲಭ ತುತ್ತಾದರು.