ಬಾಸೆಲ್ (ಸ್ವಿಡ್ಜರ್ಲ್ಯಾಂಡ್): ಸ್ಟಾರ್ ಇಂಡಿಯನ್ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕೈರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಇಂಡೋನೇಷ್ಯಾದ ಹಫೀಜ್ ಫೈಜಾಲ್ ಮತ್ತು ಗ್ಲೋರಿಯಾ ಇಮ್ಯಾನುಯೆಲ್ ವಿಡ್ಜಾಜ್ ಅವರನ್ನು ಸೋಲಿಸಿ ಮಂಗಳವಾರ ಸ್ವಿಸ್ ಓಪನ್ 2021ರ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ರಾಂಕಿರೆಡ್ಡಿ ಮತ್ತು ಪೊನ್ನಪ್ಪ ಅವರು ವಿಶ್ವ ನಂ.8 ಶ್ರೇಯಾಂಕಿತ ಆಟಗಾರರು. 38 ನಿಮಿಷಗಳ ಕಾಲ ನಡೆದ ಆಟದಲ್ಲಿ 21-18, 21-10 ನೇರ ಸೆಟ್ಗಳಿಂದ ಈ ಜೋಡಿ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಭಾರತೀಯ ಜೋಡಿ ಈಗ ಪಂದ್ಯಾವಳಿಯ ಎರಡನೇ ಸುತ್ತಿಗೆ ಮುನ್ನಡೆದಿದೆ.
ಮೊದಲ ಪಂದ್ಯವು ಎರಡೂ ತಂಡಗಳ ನಡುವೆ ಹೆಚ್ಚಿನ ಸ್ಪರ್ಧೆ ಉಂಟು ಮಾಡಿತ್ತು. ಆದರೆ, ಸೆಟ್‌ನ ಮುಕ್ತಾಯದಲ್ಲಿ ಭಾರತೀಯ ಜೋಡಿ ಪ್ರಬಲವಾಗಿ ಪ್ರದರ್ಶನ ತೋರಿ 21-18 ರಿಂದ ಗೆಲುವು ಪಡೆದಿದ್ದಾರೆ.
ಇನ್ನು ದಿನದ ಇತರ ಪಂದ್ಯದಲ್ಲಿ ಭಾರತದ ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್ ಸಿಕ್ಕಿ ರೆಡ್ಡಿ ಅವರನ್ನು ಮೂರನೇ ಶ್ರೇಯಾಂಕದ ಜೋಡಿ ಮಾರ್ಕಸ್ ಎಲ್ಲಿಸ್ ಮತ್ತು ಇಂಗ್ಲೆಂಡ್ ಲಾರೆನ್ ಸ್ಮಿತ್ ಅವರು 39 ನಿಮಿಷಗಳಲ್ಲಿ 21-18, 21-15ರಿಂದ ಸೋಲಿಸಿದರು.
ಇನ್ನು ಮುಂಬರುವ ದಿನಗಳಲ್ಲಿ ಪಿ.ವಿ ಸಿಂಧು, ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಮತ್ತು ಪರುಪಲ್ಲಿ ಕಶ್ಯಪ್ ಪಂದ್ಯಾವಳಿಯಲ್ಲಿ ತಮ್ಮ ಆಟವನ್ನು ಪ್ರಾರಂಭಿಸಲಿದ್ದಾರೆ.