ನವದೆಹಲಿ: ಹಾಂಕಾಂಗ್ ಓಪನ್ನಲ್ಲಿ ವಿಶ್ವಚಾಂಪಿಯನ್ ಪಿ.ವಿ ಸಿಂಧು ಹಾಗೂ ಹೆಚ್ಎಸ್ ಪ್ರಣಯ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಸ್ವಿಟ್ಜರ್ಲೆಂಡ್ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಪಿಯನ್ಶಿಪ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಪಿವಿ ಸಿಂಧು ನಂತರದ ಟೂರ್ನಿಗಳಲ್ಲಿ ನೀರಸ ಪ್ರದರ್ಶನ ತೋರಿ ಭಾರತೀಯ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಆದರೆ ಹಾಂಕಾಂಗ್ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ಕೇವಲ 36 ನಿಮಿಷಗಳಲ್ಲಿ ಜಯಿಸುವ ಮೂಲಕ ಆತ್ಮವಿಶ್ವಾಸದಿಂದ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ 6ನೇ ಶ್ರೇಯಾಂಕ ಪಡೆದಿರುವ ಸಿಂಧು ದಕ್ಷಿಣ ಕೊರಿಯಾದ ಕಿಮ್ ಗ ಎವುನ್ ವಿರುದ್ಧ 21-15, 21-16 ರಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಹೆಚ್ಎಸ್ ಪ್ರಣಯ್ ಚೈನಾದ ಹುವಾಂಗ್ ಯು ಕ್ಸಿಯಾಂಗ್ ಅವರನ್ನು 21-17, 21-17ರಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಸಿಂಧು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸನಾನ್ ಆಂಗ್‌ಬುಮ್ರುಂಗ್‌ಫಾನ್ ಅವರನ್ನು, ಪ್ರಣಯ್ ಇಂಡೋನೇಷ್ಯಾದ ಜೊನಾತನ್ ಕ್ರಿಸ್ಟೀ ಅವರನ್ನು ಎದುರಿಸಲಿದ್ದಾರೆ.