ಹೈದರಾಬಾದ್: ನಾಲ್ಕು ವರ್ಷಗಳ ಹಿಂದೆ ಆಗಸ್ಟ್ 19ರಂದು ರಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಪಿ.ವಿ.ಸಿಂಧು ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದು ಕೋಟ್ಯಂತರ ಭಾರತೀಯರ ಮನಸ್ಸು ಗೆದ್ದಿದ್ದರು.
2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಮೊದಲ ಪದಕ (ಕಂಚು) ತಂದುಕೊಟ್ಟಿದ್ದರು. ಆದರೆ ಸಿಂಧು ಒಂದು ಹೆಜ್ಜೆ ಮುಂದೆ ಹೋಗಿ 2016 ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಸಿಂಧು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತೀಯ ಬ್ಯಾಡ್ಮಿಂಟನ್ ಸ್ಥಿರತೆಯನ್ನು ಗುರುತಿಸಿತು ಮತ್ತು ಬ್ಯಾಡ್ಮಿಂಟನ್ನಲ್ಲಿ ಭಾರತವನ್ನು ಬಲಿಷ್ಠಗೊಳ್ಳುವಂತೆ ಮಾಡಿತು.
ಭಾರತದ ಮಾಜಿ ವಾಲಿಬಾಲ್ ಆಟಗಾರರಾದ ಪೋಷಕರಿಗೆ ಜನಿಸಿದ ಸಿಂಧು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ 2016 ಒಲಿಂಪಿಕ್ಸ್ಗೂ ಮುನ್ನ ಗಾಯಕ್ಕೆ ಒಳಗಾಗಿದ್ದರಿಂದ ಅವರ ಮೇಲೆ ಪದಕ ನಿರೀಕ್ಷೆಯಿರಲಿಲ್ಲ. ಎಲ್ಲರ ಗಮನ ಸ್ಟಾರ್ ಶೆಟ್ಲರ್ ಸೈನಾ ಮೇಲಿತ್ತು. ಆದರೆ ಉಕ್ರೇನ್ನ ಮಾರಿಯಾ ಉಲಿಟಿನಾ ವಿರುದ್ಧ ಸೋತು ಗುಂಪು ಹಂತದಲ್ಲೇ ಹೊರಬಂದಿದ್ದರಿಂದ ಭಾರತೀಯರ ಬ್ಯಾಡ್ಮಿಂಟನ್ನಲ್ಲಿ ಪದಕ ನಿರೀಕ್ಷೆಯನ್ನು ಕೈಬಿಟ್ಟಿದ್ದರು.
ಆದರೆ ಯುವ ಶಟ್ಲರ್ ಎಲ್ಲರ ಅಭಿಪ್ರಾಯಗಳನ್ನು ಹುಸಿಗೊಳಿಸಿದ್ದರು. ಕೇವಲ ಮೂರು ದಿನಗಳ ಅಂತರದಲ್ಲಿ ಟಾಪ್ 10ರೊಳಗಿನ ಶ್ರೇಯಾಂಕ ಹೊಂದಿದ್ದ ಶಟ್ಲರ್ಗಳಿಗೆ ಮನೆ ದಾರಿ ತೋರಿಸಿದ್ದರು.
10 ನೇ ಶ್ರೇಯಾಂಕದ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಲೌರಾ ಸರೋಸಿ ವಿರುದ್ಧ 21-8, 21-9 ರ ಅಂತರಿದಿಂದ ಗೆದ್ದು ಶುಭಾರಂಭ ಮಾಡಿದರು. ನಂತರ ಎರಡನೇ ಪಂದ್ಯದಲ್ಲಿ ಕೆನಡಾದ ಮಿಚೆಲ್ಲೆ ಲೀ ವಿರುದ್ಧ ಮೊದಲ ಸೆಟ್‌ನಲ್ಲೇ ಸೋಲನುಭವಿಸಿದರೂ ನಂತರ ತಿರುಗಿಬಿದ್ದು 19-21, 21-15, 21-17 ರ ಅಂತರದಲ್ಲಿ ಗೆದ್ದು ಬೀಗಿದ್ದರು.
ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಚೈನೀಸ್ ತೈಪೆಯ ತಾಯ್ ಜು ಯಿಂಗ್, ಕ್ವಾರ್ಟರ್ ಫೈನಲ್ನಲ್ಲಿ ವಾಂಗ್ ಯಿಹಾನ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರು. ನಂತರ ಸೆಮಿಫೈನಲ್ನಲ್ಲಿ ಜಪಾನ್ ನೊಜೋಮಿ ಒಕುಹರ ವಿರುದ್ಧ ಪೈಪೋಟಿ ನಡೆಸಿದ್ದರು. ವೃತ್ತಿ ಜೀವನದಲ್ಲಿ ಕೇವಲ ಒಂದೇ ಒಂದು ಬಾರಿ ಅವರನ್ನು ಮಣಿಸಿದ್ದರಿಂದ ಈ ಪಂದ್ಯ ಮೂರನೇ ಗೇಮ್ಗೆ ಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ತನ್ನ ಅಮೋಘ ಪ್ರದರ್ಶನದ ಬಲವನ್ನು ಮುಂದುವರಿಸಿದ್ದ ಹೈದರಾಬಾದ್ ಹುಡುಗಿ 21-19, 21-10ರ ನೇರ ಸೆಟ್‌ಗಳಲ್ಲಿ ಗೇಮ್ ಗೆದ್ದು ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಶಟ್ಲರ್ ಎನಿಸಿಕೊಂಡರು.
ಅದೇ ಫೈನಲ್ನಲ್ಲಿ ಸ್ಪೇನಿನ ಕರೋಲಿನಾ ಮರಿನ್ ವಿರುದ್ಧ ರೋಚಕ ಹೋರಾಟದಲ್ಲಿ ಸೋಲನುಭವಿಸಿದ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಅವರು ಫೈನಲ್ನಲ್ಲಿ 19-21, 21-12 ,15-21ರಿಂದ ಸೋಲನುಭವಿಸಿದ್ದರು. ಸಿಂಧು ಬೆಳ್ಳಿ ಗೆದ್ದ 18 ಗಂಟೆಗಳ ಅಂತರದಲ್ಲಿ ಕುಸ್ತಿಪಟು ಸಾಕ್ಷಿ ಮಲಿಕ್ 58 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಿರೀಕ್ಷಿಸಿದವರೆಲ್ಲಾ ಹುಸಿಗೊಳಿಸಿದರೂ ಈ ಇಬ್ಬರು ಯುವ ಕ್ರೀಡಾಪಟುಗಳು ಮಾತ್ರ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಸಿಂಧು ಬೆಳ್ಳಿ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಮನದಲ್ಲೂ ಸ್ಥಾನಗಿಟ್ಟಿಸಿಕೊಂಡರು. ನಂತರ ತಮ್ಮ ಬ್ಯಾಡ್ಮಿಂಟನ್ನಲ್ಲಿ ಅಧಿಪತ್ಯವನ್ನು ಮುಂದುವರಿಸುತ್ತಾ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಹಾಗೂ ವಿಶ್ವಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದರು.
2017 ಮತ್ತು 2018ರ ವಿಶ್ವಚಾಂಪಿಯನ್ಶಿಪ್ಗಳಲ್ಲಿ ಬೆಳ್ಳಿಗೆದ್ದು 'ಸಿಲ್ವರ್ ಸಿಂಧು' ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಸಿಂಧು 2019ರ ಬಿಡಬ್ಲ್ಯೂಎಫ್ ವಿಶ್ವಚಾಂಪಿಯನ್ಶಿಪ್ನಲ್ಲಿ ವಿಶ್ವಚಾಂಪಿಯನ್ ಆದರು. ಸತತ ಎರಡು ಬೆಳ್ಳಿಪದಕಗಳ ನಂತರ 2019ರ ಟೂರ್ನಿಯಲ್ಲಿ ಜಪಾನ್ನ ಒಕುಹರ ವಿರುದ್ಧ 21-7, 21-7ರ ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.
ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದ ವಿಜೇತೆ ಸಿಂಧು 2021ಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಹೊಂದಿದ್ದಾರೆ.