ಆಗ್ರಾ : ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಭಾನುವಾರ ಆಗ್ರಾಗೆ ತೆರಳಿದ್ದಾರೆ. ಇಂದು ಮುಂಜಾನೆ ಅವರು ತಾಜ್ಮಹಲ್ ಬಳಿ ತೆಗೆದಿರುವ ಫೋಟೋವೊಂದನ್ನ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.
ಸೈನಾ ಇಂದು ಬೆಳಗ್ಗೆ ಆಗ್ರಾದಿಂದ ಮಥುರಾಗೆ ತೆರಳಿದ್ದು, ಬಂಕೆ ಬಿಹಾರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ಆಟಗಾರ್ತಿಯನ್ನು ಕಣ್ತುಂಬಿಕೊಳ್ಳಲು ಜನಸಮೂಹವೇ ನೆರೆದಿದ್ದು, ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.
ಸೈನಾ ನೆಹ್ವಾಲ್ ಹಾಗೂ ಪತಿ ಪಿ.ಕಶ್ಯಪ್ ವೃಂದಾವನವನ್ನು ತಲುಪಿ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನ ಮತ್ತು ನಿಧಿವನ್ ರಾಜ್ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ರೋಹಿತ್ ಕೃಷ್ಣ ಗೋಸ್ವಾಮಿ ನೇತೃತ್ವದಲ್ಲಿ ಪೂಜೆ ನಡೆಯಿತು. ಸಮಯದ ಅಭಾವದಿಂದ ಸೈನಾ ದಂಪತಿ ಶ್ರೀಕೃಷ್ಣ ಜನ್ಮಭೂಮಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ.

ಈ ವೇಳೆ ಮಾತನಾಡಿದ ಅವರು, ಇಂದು ವಿಶ್ವ ಯೋಗ ದಿನವಾಗಿರುವುದರಿಂದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಯೋಗಿರಾಜ್ ನಾಡಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಾನು ಯುಪಿಯಲ್ಲಿ ಬ್ಯಾಡ್ಮಿಂಟನ್ ಕೋಚಿಂಗ್ ಪ್ರಾರಂಭಿಸಲು ಚಿಂತನೆ ನಡೆಸಿದ್ದೇನೆ. ಈ ಯೋಜನೆ ಕಾರ್ಯರೂಪಕ್ಕೆ ತರಲು ಸಿಎಂ ಯೋಗಿ ಆದಿತ್ಯನಾಥ್ ನೆರವು ಬೇಕಿದೆ. ರಾಜ್ಯದಲ್ಲಿ ಕೋಚಿಂಗ್ ಪ್ರಾರಂಭವಾದರೆ, ಯುಪಿ ಯುವಜನತೆ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಬಹುದು ಎಂದರು.

ಸೈನಾ ನೆಹ್ವಾಲ್ ತಾಜ್ಮಹಲ್ ಬಳಿಯ ಹೋಟೆಲ್ ಅಮರ್ ವಿಲಾಸ್ನಲ್ಲಿ ತಂಗಿದ್ದು, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ ಸೇರಿ ಇತರೆ ಸ್ಮಾರಕಗಳಿಗೆ ಭೇಟಿ ನೀಡಿದ್ದರು. ಸೈನಾ ನೆಹ್ವಾಲ್ ಇಂದು ಬೆಳಗ್ಗೆ 9 ಗಂಟೆಗೆ ಹೋಟೆಲ್ ಅಮರ್ ವಿಲಾಸ್ನಲ್ಲಿ ತೆಗೆದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ, ಸೈನಾ ಹೋಟೆಲ್ನ ಟೆರೇಸ್ ಮೇಲೆ ನಿಂತಿದ್ದು, ಹಿಂದೆ ಹಚ್ಚ ಹಸಿರಿನ ಮಧ್ಯೆ ತಾಜ್ ಮಹಲ್ ಕಾಣುತ್ತದೆ. ತಾಜ್ ಮಹಲ್ನ ಮಾರ್ನಿಂಗ್ ವ್ಯೂ ಎಂದು ಸೈನಾ ಫೋಟೋಗೆ ಶೀರ್ಷಿಕೆ ಬರೆದಿದ್ದಾರೆ.