ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ಈ ವಾರವಂತೂ ಸಂಭ್ರಮವೋ ಸಂಭ್ರಮ. ವಾರಾಂತ್ಯದಲ್ಲಿ ಗೌರಿ ಗಣೇಶ ಹಬ್ಬ ಒಂದೆಡೆಯಾದರೆ ವಾಹಿನಿಯಲ್ಲಿ ಎರಡೆರಡು ಧಾರಾವಾಹಿಗಳ ಮಹಾಸಂಗಮ ಪ್ರಸಾರವಾಗುತ್ತಿದೆ. 'ಗಟ್ಟಿಮೇಳ' ಮತ್ತು 'ಜೊತೆಜೊತೆಯಲಿ' ಧಾರಾವಾಹಿಯ ಜೊತೆಗೆ ಮತ್ತೆರಡು ಧಾರಾವಾಹಿಗಳ ಮಹಾಸಂಗಮ ಪ್ರಸಾರವಾಗಲಿದೆ.
ಕೊರೊನಾ ವೈರಸ್ ಕಾರಣದಿಂದಾಗಿ ಈ ಬಾರಿ ಯಾರೂ ಕೂಡಾ ಗೌರಿ-ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಹಾಗಿಲ್ಲ. ಅದೇ ಕಾರಣದಿಂದ ಜನರು ಕೊಂಚ ಬೇಸರದಿಂದ ಇರುವುದಂತೂ ನಿಜ. ಆದರೆ ಈ ವರ್ಷದ ಗೌರಿ-ಗಣೇಶ ಹಬ್ಬದ ಸಡಗರವನ್ನು ಇನ್ನಷ್ಟು ಹೆಚ್ಚು ಮಾಡಲು ಜೀ ಕನ್ನಡ ತಯಾರಾಗಿದೆ. ವೀಕ್ಷಕರಿಗೆ ದುಪ್ಪಟ್ಟ ಮನರಂಜನೆ ನೀಡುವ ಮೂಲಕ ಅವರನ್ನು ರಂಜಿಸಲು ವಾಹಿನಿ ಅದ್ಧೂರಿ ತಯಾರಿ ನಡೆಸಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಯಾರೆ ನೀ ಮೋಹಿನಿ' ಮತ್ತು 'ಬ್ರಹ್ಮಗಂಟು' ಧಾರಾವಾಹಿಯ ತಂಡ ಜೊತೆ ಕೂಡಿ ಗೌರಿ-ಗಣೇಶ ಹಬ್ಬ ಆಚರಿಸಲಿದೆ. ಗೌರಿ ಗಣೇಶ ಹಬ್ಬದ ಸಲುವಾಗಿ ಈ ಎರಡು ಧಾರಾವಾಹಿಗಳ ಕಲಾವಿದರು ಜೊತೆಯಾಗಲಿದ್ದು ಒಂದಾಗಿ ಹಬ್ಬವನ್ನು ಆಚರಿಸಲಿದ್ದಾರೆ. ಒಂದು ವಾರದವರೆಗೂ ಒಂದು ಗಂಟೆ ಕಾಲ ಪ್ರಸಾರವಾಗಲಿರುವ ಈ ಸಂಚಿಕೆಗಳು ವೀಕ್ಷಕರಿಗೆ ಹಬ್ಬದ ಖುಷಿಯನ್ನು ಇನ್ನಷ್ಟು ನೀಡಲಿರುವುದಂತೂ ನಿಜ.