ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅನೇಕರು ಬಣ್ಣದ ಲೋಕಕ್ಕೆ ಬರುವ ಮುನ್ನ ಬೇರೆಯೇ ಗುರಿ ಹೊಂದಿರುತ್ತಾರೆ. ಆದರೆ ಅವರೆಲ್ಲಾ ಆಕಸ್ಮಿಕವಾಗಿ ಅಂದುಕೊಳ್ಳದೆ ಬಣ್ಣದ ಲೋಕಕ್ಕೆ ಬರುತ್ತಾರೆ. ಕಿರುತೆರೆ ನಟಿ ರಕ್ಷಾಗೆ ಕೂಡಾ ಐಎಎಸ್ ಅಧಿಕಾರಿಯಾಗಬೇಕು ಎಂಬ ಮಹಾದಾಸೆ ಇತ್ತಂತೆ. ಆದರೆ ಬಯಸದೇ ಬಂದ ಅವಕಾಶ ಆಕೆಯನ್ನು ನಟಿಯನ್ನಾಗಿಸಿದೆ.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದ ಈಕೆ ಇಂದು ಪರಭಾಷೆಯ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾ ಆಗಿ ನಟನಾ ಪಯಣ ಆರಂಭಿಸಿದ ರಕ್ಷಾಗೆ ಬಣ್ಣದ ಬದುಕು ತೀರಾ ಅನಿರೀಕ್ಷಿತವಾದುದು. ರಾಧಾ ರಮಣ ಧಾರಾವಾಹಿಯ ಆಡಿಶನ್ನಲ್ಲಿ ಆಯ್ಕೆಯಾದ ಅನ್ವಿತಾ, ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕಿ ಪುಟ್ಮಲ್ಲಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು.
ರಕ್ಷಾ ತೆಲುಗಿನ 'ಕೃಷ್ಣವೇಣಿ' ಧಾರಾವಾಹಿಯಲ್ಲಿ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗಿನ ಸ್ಟಾರ್ ಮಾ ಧಾರಾವಾಹಿಯಲ್ಲಿ ಆರಂಭವಾಗಲಿರುವ ಹೊಸ ಧಾರಾವಾಹಿ 'ಗುಂಡೆಂತ ಮನಸು' ಧಾರಾವಾಹಿಯಲ್ಲಿ ಕೂಡಾ ನಾಯಕಿಯಾಗಿ ರಕ್ಷಾ ಅಭಿನಯಿಸಲಿದ್ದಾರೆ. ಆ ಮೂಲಕ ಪರಭಾಷಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ ಈ ಕನ್ನಡತಿ. ರಕ್ಷಾ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಅಶ್ವಿನಿ ಪಲ್ಲಕ್ಕಿ ನಿರ್ದೇಶನದ 'ಫೋಟೋಗ್ರಾಫರ್ ಪಾಂಡು' ಸಿನಿಮಾದಲ್ಲಿ ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಒಳ್ಳೆ ಅವಕಾಶಗಳು ದೊರೆತರೆ ಈಕೆ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ.