ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ರಾಧಾ ರಮಣ' ಮರು ಪ್ರಸಾರ ಆರಂಭಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಅದು ಕೂಡಾ ಎರಡೆರಡು ಬಾರಿ. ಕಲರ್ಸ್ ಕನ್ನಡದಲ್ಲಿ ಬೆಳಗ್ಗೆ ಪ್ರಸಾರವಾದರೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಸಂಜೆ ಪ್ರಸಾರ ಕಾಣುತ್ತಿದೆ.
ಸ್ಕಂದ ಅಶೋಕ್
'ಯೂ ಟರ್ನ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಚಿಕ್ಕಮಗಳೂರಿನ ಚಾಕೊಲೇಟ್ ಹೀರೋ ಸ್ಕಂದ ಅಶೋಕ್ ವೀಕ್ಷಕರಿಗೆ ಹತ್ತಿರವಾಗಿದ್ದು ರಮಣನಾಗಿ ನಟಿಸಿದ ನಂತರವೇ. ರಮಣನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸ್ಕಂದ, ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿ. ದೇವಯಾನಿ, ಭೈರಾದೇವಿ, ರಣರಂಗ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಇವರು ನಿಜ ಜೀವನದಲ್ಲಿ ತಂದೆಯಾಗಿ ಭಡ್ತಿ ಪಡೆದಿದ್ದಾರೆ. ಲಾಕ್ಡೌನ್ ಸಮಯದಲ್ಲಿ ತಮ್ಮ ಮುದ್ದಿನ ಮಡದಿ ಶಿಖಾ ಪ್ರಸಾದ್ ಅವರೊಂದಿಗೆ ಕಾಲ ಕಳೆಯುತ್ತಿರುವ ಸ್ಕಂದ, ಪತ್ನಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಶ್ವೇತಾ ಪ್ರಸಾದ್
ನಾಯಕಿ ಆರಾಧನಾ ಆಗಿ ಅಭಿನಯಿಸಿ ವೀಕ್ಷಕರ ಮನ ಗೆದ್ದ ಮುದ್ದು ಮುಖದ ಚೆಲುವೆ ಕಿರುತೆರೆ ಲೋಕಕ್ಕೆ ಬಂದಿದ್ದು ಶ್ರುತಿ ನಾಯ್ಡು ನಿರ್ದೇಶನದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿಯಾಗಿ. ಫೇಸ್ಬುಕ್ನಲ್ಲಿ ಹಾಕಿದ ಫೋಟೋದಿಂದ ಅವಕಾಶ ಗಿಟ್ಟಿಸಿಕೊಂಡ ಶ್ವೇತಾ, ನಂತರ ಕಾಣಿಸಿಕೊಂಡಿದ್ದು ರಾಧಾ ಮಿಸ್ ಆಗಿ. ವೀಕ್ಷಕರ ಫೇವರೆಟ್ ರಾಧಾ ಮಿಸ್ ಆಗಿ ಜನಪ್ರಿಯರಾಗಿದ್ದ ಶ್ವೇತಾ ಪ್ರಸಾದ್ ಕ್ರಾಂಟ್ಯಾಕ್ಟ್ ಮುಗಿದಾಗ ಧಾರಾವಾಹಿಯಿಂದ ಹೊರಬಂದದ್ದು ವೀಕ್ಷಕರಿಗೆ ಬೇಸರವಾಗಿತ್ತು. ಆಗ್ಗಾಗ್ಗೆ ಪೋಟೋಶೂಟ್ ಮಾಡಿಸುವ ಶ್ವೇತಾ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದಾರೆ.
ಅಶ್ವಿನಿ
ನಾಯಕ ರಮಣನ ತಂಗಿ ಅವನಿಯಾಗಿ ನಟಿಸಿರುವ ಅಶ್ವಿನಿ ಸದ್ಯ ಜೀ ಕನ್ನಡ ವಾಹಿನಿಯ 'ಗಟ್ಟಿಮೇಳ ' ಧಾರಾವಾಹಿಯಲ್ಲಿ ಆರತಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಲ್ಲಿ ಬ್ಯುಸಿಯಾಗಿರುವ ಆಕೆ ಬಿಡುವಿನ ವೇಳೆಯಲ್ಲಿ ಫೋಟೋಶೂಟ್ ಮಾಡಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ.
ಆಶಿತ ಚಂದ್ರಪ್ಪ
'ರಾಧಾ ರಮಣ' ಧಾರಾವಾಹಿಯಲ್ಲಿ ನಕಲಿ ಅವನಿಯಾಗಿ ಕಾಣಿಸಿಕೊಡಿದ್ದ ಆಶಿತ ಚಂದ್ರಪ್ಪ 'ಜೊತೆಜೊತೆಯಲಿ' ಧಾರಾವಾಹಿಯ ಶಾಲಿನಿ ಆಗಿ ಕಿರುತೆರೆ ಪಯಣ ಆರಂಭಿಸಿದವರು. ಸದ್ಯ ಕಿರುತೆರೆಯಿಂದ ದೂರ ಇರುವ ಅವರು ತಮ್ಮಿಷ್ಟದ ಫ್ಯಾಷನ್ ಡಿಸೈನಿಂಗ್ ಕೆಲಸ ಮಾಡುತ್ತಿದ್ದಾರೆ.
ಸುಜಾತಾ ಅಕ್ಷಯ
ನಾಯಕ ರಮಣ್ ಅತ್ತೆ ಸಿತಾರಾ ದೇವಿಯಾಗಿ ನಟಿಸಿದ್ದ ಸುಜಾತಾ ಅಕ್ಷಯ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಿಚನ್ ದರ್ಬಾರ್' ನಿರೂಪಕಿಯಾಗಿ ಗಮನ ಸೆಳೆದಿರುವ ಇವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿಯ ಅಮ್ಮನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಅನುಷಾ ಹೆಗ್ಡೆ
'ರಾಧಾರಮಣ' ಧಾರಾವಾಹಿಯಲ್ಲಿ ವಿಲನ್ ದೀಪಿಕಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಅನುಷಾ ಹೆಗ್ಡೆ ಅವರು ಕೂಡಾ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗು ಧಾರಾವಾಹಿಯಲ್ಲಿ ನಟಿಸುವಾಗ ಸಹನಟನನ್ನು ಪ್ರೀತಿಸಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನೆ.ಲ.ನರೇಂದ್ರ ಬಾಬು
ರಮಣನ ಚಿಕ್ಕಪ್ಪನಾಗಿ ಮನೋಜ್ಞವಾಗಿ ಅಭಿನಯಿಸಿದ್ದ ನೆ.ಲ. ನರೇಂದ್ರ ಬಾಬು ಅವರು ಕೂಡಾ ಈಗ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿ ನರೇಂದ್ರ ಬಾಬು ಸುಜಾತಾ ಅಕ್ಷಯ ಅವರ ಪತಿಯಾಗಿ ನಟಿಸುತ್ತಿರುವುದು ವಿಶೇಷ.
ಮಾನ್ಸಿ ಜೋಷಿ
ಅನ್ವಿತಾ ಪಾತ್ರಧಾರಿ ರಕ್ಷ, ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಾಗ ಆ ಜಾಗಕ್ಕೆ ಬಂದವರೇ ಮಾನ್ಸಿ ಜೋಷಿ. 'ಬಿಳಿಹೆಂಡ್ತಿ' ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿರುವ ಈಕೆ, 'ಪಾರು' ಧಾರಾವಾಹಿಯ ಜೊತೆಗೆ 'ನಾಯಕಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. 'ರಾಧಾ ರಮಣ' ಧಾರಾವಾಹಿಯಲ್ಲಿ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಿದ ಈಕೆ ಉಳಿದ ಮೂರು ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದರ ಜೊತೆಗೆ ತಮಿಳಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಸದ್ಯಕ್ಕೆ ಲಾಕ್ಡೌನ್ ಇರುವುದರಿಂದ ಇವರ ಚಟುವಟಿಕೆಗಳಿಗೆ ಬ್ರೇಕ್ ಸಿಕ್ಕಿದೆ.