ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಮೆಗಾ ಧಾರಾವಾಹಿಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿ ದಿನೇ ದಿನೆ ಹೆಚ್ಚಿನ ವೀಕ್ಷಕರನ್ನೂ ತನ್ನತ್ತ ಸೆಳೆಯುತ್ತಿದೆ.
ಇನ್ನು ‘ಹರಹರ ಮಹದೇವ‘ ಧಾರಾವಾಹಿಯಲ್ಲಿ ಶಿವನ ಪಾತ್ರ ಹಾಗೂ ‘ಜೈ ಹನುಮಾನ್‘ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದ ನಟ ವಿನಯ್ ಗೌಡ ಇದೀಗ ‘ನಂದಿನಿ‘ ಧಾರಾವಾಹಿ ತಂಡ ಸೇರಿಕೊಂಡಿದ್ದಾರೆ. ಈ ಹಿಂದೆ ವಿರಾಟ್ ಎಂಬ ಪಾತ್ರ ಮಾಡುತ್ತಿದ್ದ ರಾಜೇಶ್ ಧ್ರುವ ಈ ಧಾರಾವಾಹಿಯಿಂದ ಹೊರ ಹೋಗಿದ್ದು ಅವರ ಪಾತ್ರವನ್ನು ವಿನಯ್ ನಿಭಾಯಿಸಲಿದ್ದಾರೆ. ವಿಶೇಷ ಎಂದರೆ ರಾವಣನ ಪಾತ್ರಕ್ಕಾಗಿ 120 ಕಿಲೋ ತೂಕ ಹೆಚ್ಚಿಸಿಕೊಂಡಿದ್ದ ವಿನಯ್ ‘ನಂದಿನಿ‘ ಯ ವಿರಾಟ್ ಪಾತ್ರಕ್ಕಾಗಿ 20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ.
ತಮಿಳು ಖ್ಯಾತ ನಟ ವಿಜಯ್ ಕುಮಾರ್, ನಟಿ ಖುಷ್ಬು, ಮಲಯಾಳಂ ನಟಿ ಮಾಳವಿಕಾ, ಹಿಂದಿ ನಟ ರಿಯಾಜ್ ಖಾನ್ ಹಾಗೂ ಇನ್ನಿತರರು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕೂ ಭಾಷೆಗಳನ್ನೂ ಧಾರಾವಾಹಿ ಪ್ರಸಾರವಾಗುತ್ತಿದೆ.