ಕಿರುತೆರೆ ವೀಕ್ಷಕರು ಕಳೆದ 15 ದಿನಗಳಿಂದ ಮಹಾಸಂಗಮ ಧಾರಾವಾಹಿಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಮೆಚ್ಚಿನ ಧಾರಾವಾಹಿಗಳು ಈಗ ಪ್ರತಿದಿನ ತಪ್ಪದೆ ಪ್ರಸಾರವಾಗುತ್ತಿರುವುದಕ್ಕೆ ನೆಮ್ಮದಿಯಿಂದ ಇದ್ದಾರೆ. ಈ ನಡುವೆ ಕೆಲವೊಂದು ಧಾರಾವಾಹಿಗಳು ಮಾತ್ರ ಆರಂಭವಾದಾಗಿನಿಂದ ಇದುವರೆಗೂ ಟಾಪ್ 5 ಸ್ಥಾನವನ್ನು ಕಾಪಾಡಿಕೊಂಡು ಬಂದಿವೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಹಾಗೂ 'ಜೊತೆಜೊತೆಯಲಿ' ಧಾರಾವಾಹಿ ಇದೀಗ ಮೊದಲ ಸ್ಥಾನದಲ್ಲಿದ್ದು ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾಸಂಗಮ ಸಂಚಿಕೆಗಳು ವೀಕ್ಷಕರ ಮನಗೆದ್ದು ಹಿಟ್ ಆಗಿತ್ತು. ಈ ಎರಡು ಧಾರಾವಾಹಿಗಳ ನಡುವೆ ಭಾರೀ ಪೈಪೋಟಿ ಇದೆ ಎನ್ನಬಹುದು.

ಜೀ ಕನ್ನಡದ 'ಪಾರು' ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಉತ್ತಮ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ 'ಪಾರು' ಟಾಪ್ ಐದು ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೂಪರ್ ನ್ಯಾಚುರಲ್ ತ್ರಿಕೋನ ಕಥೆ ಹೊಂದಿರುವ 'ನಾಗಿಣಿ-2' ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ನಾಗಲೋಕದಿಂದ ಬಂದಿರುವ ನಾಗಿಣಿ ತನ್ನ ಪ್ರಿಯಕರ ಆದಿಶೇಷನನ್ನು ಹುಡುಕಿಕೊಂಡು ಭೂಲೋಕಕ್ಕೆ ಬಂದಿದ್ದು, ನಾಗಮಣಿಯನ್ನು ಹುಡುಕಲು ಹರ ಸಾಹಸ ಪಡುವ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ.

ಇವೆಲ್ಲದರೊಂದಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದ್ದು ಜೀ ಕನ್ನಡದ ಮತ್ತೊಂದು ಧಾರಾವಾಹಿ 'ಕಮಲಿ' ಐದನೇ ಸ್ಥಾನದಲ್ಲಿದೆ.
