ಪತಿ-ಪತ್ನಿ, ಅಕ್ಕ-ತಂಗಿ, ಅಣ್ಣ-ತಂಗಿ, ಅಮ್ಮ-ಮಗಳು, ಅಮ್ಮ-ಮಗ ಹೀಗೆ ಬಣ್ಣದ ಲೋಕದಲ್ಲಿ ಎಲ್ಲರೂ ಮಿಂಚುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಅಕ್ಕ-ತಮ್ಮ. ಅಂದ ಹಾಗೇ ಆ ಅಕ್ಕ ಬೇರಾರೂ ಅಲ್ಲ, ಕಿರುತೆರೆಯ ಜನಪ್ರಿಯ ನಟಿ ಅನಿಕಾ ಸಿಂಧ್ಯಾ.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕುಮುದಾ ಆಗಿ ರಾಜ್ಯಾದ್ಯಂತ ಮನೆ ಮಾತಾಗಿರುವ ಅನಿಕಾ ಸಿಂಧ್ಯಾ ಈಗಾಗಲೇ ಸುಮಾರು 45 ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರೂ ಹೆಸರು ತಂದುಕೊಟ್ಟಿದ್ದು ಮಾತ್ರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕುಮುದಾ ಪಾತ್ರ. ನೆಗೆಟಿವ್ ಪಾತ್ರಗಳಲ್ಲಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿರುವ ಅನಿಕಾ ಸಿಂಧ್ಯಾ ಅವರ ತಮ್ಮ ವಿನಯ್ ಸಿಂಧ್ಯಾ ಕೂಡಾ ಬಣ್ಣದ ಲೋಕಕ್ಕೆ ಪರಿಚಿತ ಮುಖ.
ಮಾಡೆಲ್ ಆಗಿರುವ ವಿನಯ್ ಸಿಂಧ್ಯಾ ಈಗಾಗಲೇ ಸುಮಾರು ವೇದಿಕೆಗಳಲ್ಲಿ ರ್‍ಯಾಂಪ್ ವಾಕ್ ಮಾಡಿದ್ದಾರೆ. ಮಾತ್ರವಲ್ಲ ಅನೇಕ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿರುವ ವಿನಯ್ ಸಿಂಧ್ಯಾ ಅಕ್ಕನ ಹಾದಿಯನ್ನೇ ಹಿಡಿದಿದ್ದಾರೆ. ರೂಪದರ್ಶಿಯಾಗಿ ಮಿಂಚಿದ ವಿನಯ್ ಸಿಂಧ್ಯಾ ಇದೀಗ ಮಾಡೆಲಿಂಗ್ನಿಂದ ನಟನಾಗಿ ಭಡ್ತಿ ಪಡೆದಿದ್ದಾರೆ. ರ್‍ಯಾಂಬೋ 2 ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಯಾನ ಆರಂಭಿಸಿರುವ ವಿನಯ್ ಸಿಂಧ್ಯಾಗೆ ನಟನಾ ಲೋಕದಲ್ಲಿ ಮಿಂಚುವ ಬಯಕೆ.
ಫಿಟ್ನೆಸ್ ಪ್ರಿಯರಾಗಿರುವ ವಿನಯ್ ಸಿಂಧ್ಯಾ ಒಂದು ದಿನವೂ ವ್ಯಾಯಾಮವನ್ನು ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಮಾತ್ರವಲ್ಲ ಅಕ್ಕ ಅನಿಕಾ ಸಿಂಧ್ಯಾ ಜಿಮ್ಗೆ ಹೋಗದಿದ್ದರೂ ಮನೆಯಲ್ಲೇ ತಮ್ಮ ನೀಡುವ ಸಲಹೆಯಂತೆ ವ್ಯಾಯಾಮ ಮಾಡಿಕೊಂಡು ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅನಿಕಾ ಸಿಂಧ್ಯಾ ಮತ್ತು ವಿನಯ್ ಸಿಂಧ್ಯಾ ಅಕ್ಕ ತಮ್ಮನಿಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ಸ್ ರೀತಿ ಇರುತ್ತಾರಂತೆ.