ಕನ್ನಡ ಕಿರುತೆರೆಯ ಅತ್ಯುತ್ತಮ ವಾಹಿನಿ ಎನಿಸಿಕೊಂಡಿರುವ ಕಲರ್ಸ್ ಕನ್ನಡ ಈ ಬಾರಿಯೂ ಬಿಗ್ಬಾಸ್ - 7ನೇ ಸೀಸನ್ ಆರಂಭಿಸಿದೆ. ಉಳಿದೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್ಬಾಸ್ ಭಾರತದ ಬಹುತೇಕ ಭಾಷೆಗಳಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಅಂದಾಜಿನ ಪ್ರಕಾರ ಬಿಗ್ಬಾಸ್ ಶೋ ಪ್ರತಿನಿತ್ಯ ಒಂದು ಕೋಟಿ ವೀಕ್ಷಕರನ್ನು ತಲುಪುತ್ತದೆ. ನಿಮಗೆ ಗೊತ್ತಿರುವಂತೆ ನಾನು ಟಿವಿ ನೋಡುವುದಿಲ್ಲ. ನಾನೇ ನಟಿಸಿದ ಒಂದಷ್ಟು ಸಿನಿಮಾಗಳನ್ನು ನಾನೇ ನೋಡಿಲ್ಲ. ಅವೆರಡೂ ನನ್ನ ಪಾಲಿಗೆ ಆನ್ ಇಂಟ್ರೆಸ್ಟಿಂಗ್. ನನ್ನದೇನಿದ್ದರೂ ಅಕ್ಷರ ಉಂಟು, ಪುಸ್ತಕ ಉಂಟು. ಆ ಪ್ರೀತಿಯಿಂದಲೇ ನಾನು ಇಪ್ಪತ್ತೈದು ವರ್ಷ ಅವಿಚ್ಛಿನ್ನವಾಗಿ ‘ಹಾಯ್ ಬೆಂಗಳೂರ್!’ ಪತ್ರಿಕೆ ನಡೆಸಿದೆ. ಅದು ನನಗೆ ಅನ್ನ ಕೊಟ್ಟಿತು. ಆತ್ಮ ಸಮಾಧಾನ ಕೊಟ್ಟಿತು ಎಂದು ಬರೆದಿದ್ದಾರೆ.
ಅಷ್ಟೇ ಅಲ್ಲದೆ ನನ್ನ ಅನೇಕ ವರ್ಷಗಳ ಕನಸಾದ ‘ಓ ಮನಸೇ’ ಪಾಕ್ಷಿಕವನ್ನು ಆರಂಭಿಸಿದೆ. ಈ ತೆರನಾದ ಪತ್ರಿಕೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗುತ್ತದೋ ಎಂಬ ಆತಂಕವಿತ್ತು. ಇವತ್ತಿಗು ಆದು 155 ಸಂಚಿಕೆ ದಾಟಿ ಕನ್ನಡದ ಮನೆ ಮಾತಾಗಿದೆ. ಇವತ್ತು ಅದನ್ನು ಪ್ರತಿಯೊಬ್ಬರು ಸಂತೋಷದಿಂದ ಆತ್ಮವಿಶ್ವಾಸಕ್ಕಾಗಿ ಓದುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ರವಿ ಅಜ್ಜೀಪುರ ಅದರ ಸಂಪಾದಕತ್ವವನ್ನು ತುಂಬ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ನನಗೆ ಬಿಗ್ಬಾಸ್ ಬೇಕಾಗಿತ್ತಾ? ಎಂಬುದು ನನ್ನ ಪ್ರಶ್ನೆ ಎಂದು ಬರೆದಿದ್ದಾರೆ.
ಇನ್ನು ಬಿಗ್ಬಾಸ್ ಮನೆಗೆ ಹೋಗುವ ಕುರಿತು, ನನ್ನ ಯುವ ಮಿತ್ರ ಹಾಗೂ ಕ್ರಿಯಾಶೀಲ ಯುವಕ ಕಲರ್ಸ್ ವಾಹಿನಿಯನ್ನು ತುಂಬ ಯಶಸ್ವಿಯಾಗಿ ನಡೆಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಬಂದು ಅಕ್ಕರೆಯಿಂದ ನಮ್ಮ ‘ಬಿಗ್ಬಾಸ್’ ರಿಯಾಲಿಟಿ ಶೋಗೆ ನೀವೇಕೆ ಬರಬಾರದು? ಅಂದರು. ನನ್ನನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಸಿಬ್ಬಂದಿ ಮತ್ತು ಗೆಳೆಯರು ‘ಬಾಸ್’ ಅಂತಲೇ ಕರೆಯುತ್ತಾರೆ. ಈಗೊಮ್ಮೆ ‘ಬಿಗ್ಬಾಸ್’ ಆಗಿ ನೋಡಿ ಅಂತ ಪರಂ ನಕ್ಕರು. ಯಾಕೋ ಇಲ್ಲವೆನ್ನಲಾಗಲಿಲ್ಲ. ಅಲ್ಲಿ ದಿನಗಟ್ಟಲೆ ನ್ಯೂಸ್ ಪೇಪರ್ ಸಿಗುವುದಿಲ್ಲ, ಕಾಫಿ ಸಿಗುವುದಿಲ್ಲ, ಪೀಡೆಯಂತಹ ಮೊಬೈಲ್ ಸಿಗುವುದಿಲ್ಲ. ಒಂದಷ್ಟು ದಿನ ನನಗೆ ಪರಿಚಯವೇ ಇಲ್ಲದ ‘ಸೆಲೆಬ್ರಿಟಿಗಳ’ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವ ಅವಕಾಶ ನನಗೆ ದೊರೆತಿದೆ. ಪರಂ ಆಗ್ರಹಕ್ಕೆ ಇಲ್ಲವೆನ್ನಲಾಗದೆ ಬಿಗ್ಬಾಸ್ ಮನೆಗೆ ಹೋಗುತ್ತಿದ್ದೇನೆ. ಒಂದು ಮಾತಿನ ಪ್ರಕಾರ 'ಬಾಸ್ ಈಜ್ ಆಲ್ವೇಸ್ ರೈಟ್' ಎಂದಿನಂತೆ ನಿಮ್ಮ ಹಾರೈಕೆ ಇರಲಿ. -ರವಿ ಬೆಳಗೆರೆ ಎಂದು ಬರೆದುಕೊಂಡಿದ್ದಾರೆ.