ಬೆಳ್ಳಿತೆರೆ ಮೂಲಕ ವೃತ್ತಿ ಬದುಕು ಆರಂಭಿಸಿದ ಎಷ್ಟೋ ನಟ-ನಟಿಯರು ಕಿರುತೆರೆಯಲ್ಲೂ ನಟಿಸಿದ್ದಾರೆ. ಸಿನಿಮಾ ಮೂಲಕ ಕರಿಯರ್ ಆರಂಭಿಸಿ ಕೆಲವೊಂದು ಚಿತ್ರಗಳಲ್ಲಿ ಮಿಂಚಿದ್ದ ಸ್ವಾತಿ ಕೊಂಡೆ ಇದೀಗ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಸ್ವಾತಿ ಕೊಂಡೆ ಮೂಲತ: ತುಮಕೂರಿನವರು. ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಮಾಡೆಲಿಂಗ್. ಫ್ಯಾಷನ್ ಲೋಕದಿಂದ ಸಿನಿಮಾಗಳತ್ತ ಮುಖ ಮಾಡಿದ್ದ ಸ್ವಾತಿ ಕೊಂಡೆ, 'ಬ್ಯೂಟಿಫುಲ್ ಮನಸುಗಳು' ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ಅಭಿನಯಿಸಿದ್ದರು. ನಂತರ ಕಮರೊಟ್ಟು ಚೆಕ್ಪೋಸ್ಟ್, ವೆನಿಲ್ಲಾ, ರಾಮ ರಾಜ್ಯ, ಕಟ್ಟುಕಥೆ ಸಿನಿಮಾಗಳಲ್ಲಿ ನಟಿಸಿರುವ ಸ್ವಾತಿ ಕೊಂಡೆ ಇದೀಗ 'ಯಾರಿವಳು' ಧಾರಾವಾಹಿಯ ಮಾಯಾ ಪಾತ್ರದ ಮೂಲಕ ಕಿರುತೆರೆ ಯಾನ ಶುರು ಮಾಡಿದ್ದಾರೆ.
'ಯಾರಿವಳು' ಧಾರಾವಾಹಿಯಲ್ಲಿ ಕಥಾನಾಯಕಿ ಮಾಯಾ ಆಗಿ ನಟಿಸಿರುವ ಸ್ವಾತಿ, ರಗಡ್ ಲುಕ್ನಲ್ಲಿ ಕಿರುತೆರೆ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಆಂಜನೇಯನ ಪರಮ ಭಕ್ತೆಯಾಗಿರುವ ಮಾಯಾ ಯಾವುದೇ ಕೆಲಸವನ್ನು ಮಾಡುವ ಮೊದಲು ಭಜರಂಗಿಯನ್ನು ನೆನೆದೇ ಮುಂದಿನ ಕಾರ್ಯ ಮಾಡುವುದು. ಏನೇ ಆಗಲಿ ತುಂಬಾ ಧೈರ್ಯದಿಂದ ಮುನ್ನುಗ್ಗುವ ಮಾಯಾ ರಿಯಲ್ ಲೈಫ್ನಲ್ಲೂ ಸ್ವಲ್ಪ ಬಜಾರಿಯಂತೆ. ಅದೇ ಕಾರಣದಿಂದ ಮಾಯಾ ಪಾತ್ರದಲ್ಲಿ ನಟಿಸುವಾಗ ಕಷ್ಟವಾಗಲಿಲ್ಲವಂತೆ. ಸಿನಿಮಾಗಳಲ್ಲಿ ಹೆಸರು ಮಾಡಿರುವ ಸ್ವಾತಿ ಧಾರಾವಾಹಿಪ್ರಿಯರನ್ನು ಹೇಗೆ ರಂಜಿಸಲಿದ್ದಾರೆ ನೋಡಬೇಕು.