ನವಗ್ರಹ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ, ತನ್ನದೇ ಚಾಪು ಮೂಡಿಸಿದ ನಟ ಧರ್ಮ ಕೀರ್ತಿರಾಜ್. ಇತ್ತೀಚೆಗೆ ಹಿಂದಿಯ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಧರ್ಮ ಕೀರ್ತಿರಾಜ್ ಇದೀಗ 'ಸುಮನ್' ಆಗಿದ್ದಾರೆ.
ಹೌದು. 'ಸುಮನ್' ಧರ್ಮ ಕೀರ್ತಿರಾಜ್ ಅಭಿನಯಿಸುತ್ತಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಧ್ವನಿ ಸುರುಳಿಯನ್ನ ಇತ್ತೀಚೆಗಷ್ಟೇ ಅನಾವರಣ ಮಾಡಲಾಯಿತು. ಗುರುವಾರ ಸುಮನ್ ಚಿತ್ರದ ಹಾಡುಗಳನ್ನ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ನಂದಕಿಶೋರ್ , ಧರ್ಮ ಅವರ ತಂದೆ ಕೀರ್ತಿ ರಾಜ್ ಹಾಗೂ ನನ್ನ ತಂದೆ ಸುಧೀರ್ ಆತ್ಮೀಯ ಸ್ನೇಹಿತರು. ನಾನು ಮತ್ತು ಧರ್ಮ ಕೀರ್ತಿ ಕೂಡ ಹಾಗೆ. ಧರ್ಮ ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದಾನೆ. ಅವನಿಗೆ ಈ ಸಿನಿಮಾದಿಂದ ಒಳ್ಳೆ ಬ್ರೇಕ್ ಸಿಗಲಿ ಎಂದು ಹಾರೈಸಿದರು.
ಇದೊಂದು ತ್ರಿಕೋನ ಪ್ರೇಮಕಥೆ. ಐದು ಹಾಡುಗಳು ಹಾಗೂ ಐದು ಸಾಹಸ ಸನ್ನಿವೇಶಗಳಿವೆ. ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ರವಿ ಸಾಗರ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಮುತ್ತು ಕುಮಾರ ಎಂಬ ಚಿತ್ರ ನಿರ್ದೇಶಿಸಿದ್ದ, ರವಿ ಸಾಗರ್ ಅವರ 2ನೇಯ ಚಿತ್ರ ಇದಾಗಿದೆ.
ನಟ ಧರ್ಮ ಕೀರ್ತಿರಾಜ್ ಮಾತನಾಡಿ, ಕೊರೊನಾ ಆರಂಭವಾಗುವುದಕ್ಕೆ ಮುಂಚೆ ನಮ್ಮ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಮುಗಿದ ಮೇಲೆ ಚಿತ್ರೀಕರಣ ಮುಗಿಸಿದ್ದೇವೆ. ನನ್ನೊಂದಿಗೆ ಮೂವರು ನಾಯಕಿಯರು ನಟಿಸಿದ್ದಾರೆ. ಎಲ್ಲರ ಅಭಿನಯ ಚೆನ್ನಾಗಿದೆ ಎಂದರು.
ಜುಬಿನ್ ಪಾಲ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡುಗಳು ಇಂಪಾಗಿವೆ. ಚಿತ್ರದ ಕಥೆ ಚೆನ್ನಾಗಿದೆ ಎಂದ ನಿಮಿಕಾ ಕೊರೆವ ಚಳಿಯಲ್ಲಿ ಚಿತ್ರೀಕರಣದಲ್ಲಿ ಅಭಿನಯಿಸಿದ ಅನುಭವ ಹಂಚಿಕೊಂಡರು. ನಾನು ನಿಜ ಜೀವನದಲ್ಲೂ ಸ್ವಲ್ಪ ಸ್ಟ್ರಾಂಗ್. ಯಾವುದಕ್ಕೂ ಅಷ್ಟು ಬೇಗ ಹೆದರಲ್ಲ. ಈ ಚಿತ್ರದಲ್ಲಿ ಅಂತಹದೇ ಪಾತ್ರ. ನನ್ನೂರು ಮೈಸೂರು. ಹೆಚ್ಚಾಗಿ ಮೈಸೂರಿನಲ್ಲೇ ಚಿತ್ರೀಕರಣವಾಗಿದ್ದು, ಸಂತೋಷ ಎನ್ನುತ್ತಾರೆ ರಜನಿ ಭಾರದ್ವಾಜ್.
ನನಗೆ ಇದು ಮೊದಲ ಚಿತ್ರ. ಸ್ವಲ್ಪ ನೆಗಟಿವ್ ಪಾತ್ರ. ಧರ್ಮ ಅವರ ಜತೆ ನಟಿಸಿದ್ದು ಸಂತಸ ತಂದಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದು ನಾಯಕಿ ಜೈಲಿನ್ ಗಣಪತಿ ಹೇಳಿದರು.
ಸಾಹಿತಿ ಎ.ಶಾಂತ್ ಕುಕ್ಕೂರ್ ಬರೆದಿರುವ ಹಾಡುಗಳಿಗೆ ಜುಬಿನ್ ಪಾಲ್ ಸಂಗೀತ ನೀಡಿದ್ದಾರೆ. ಎಂ.ಪಿ.ಶಿವಕುಮಾರ್, ರಾಘವೇಂದ್ರ ಸಿಂಗ್, ಮೋಹನ್ ಕುಮಾರ್ ಎಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಮೂರನೆ ಅಲೆಯ ಆರ್ಭಟ ಕಡಿಮೆಯಿದ್ದರೆ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: ದರ್ಶನ್ಗೆ ಧರ್ಮ ಕೀರ್ತಿರಾಜ್ ಅಂದ್ರೆ ಇಷ್ಟವಂತೆ: ಯಾಕೆ ಗೊತ್ತಾ?