ಸಿನಿಮಾ, ಕಿರುತೆರೆ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳೂ ಕೊರೊನಾ ಹೊಡೆತದಿಂದ ನಲುಗಿವೆ. ಕಿರುತೆರೆ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದ್ದು ಕೆಲವು ದಿನಗಳಿಂದ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳು ಮತ್ತೆ ಆರಂಭವಾಗಿವೆ. ಆದರೆ ಕೆಲವೊಂದು ಧಾರಾವಾಹಿಗಳು ಅರ್ಧಕ್ಕೇ ತಮ್ಮ ಪ್ರಯಾಣ ನಿಲ್ಲಿಸಲಿವೆ.
ಉದಯ ವಾಹಿನಿಯ ನಾಯಕಿ, ನಾನು ನನ್ನ ಕನಸು, ದೇವಯಾನಿ, ಕಾವೇರಿ, ಜೀವನದಿ ಧಾರಾವಾಹಿಗಳು ಪ್ರಸಾರ ನಿಲ್ಲಿಸಿದವು. ಅಂದ ಹಾಗೆ ಲಾಕ್ಡೌನ್ ಒಂದು ನೆಪವಷ್ಟೇ. ಇದರಲ್ಲಿ ಕೆಲವೊಂದು ಧಾರಾವಾಹಿಗಳಿಗೆ ವೀಕ್ಷಕರ ಕೊರತೆ ಇದ್ದಿದ್ದರಿಂದ ಈ ಧಾರಾವಾಹಿಗಳ ಪ್ರಸಾರ ನಿಲ್ಲಿಸಿದೆ. ಉದಯ ವಾಹಿನಿ ನಂತರ ಕಲರ್ಸ್ ಕನ್ನಡ ವಾಹಿನಿಯ 'ರಂಗನಾಯಕಿ' ಧಾರಾವಾಹಿ ಕೂಡಾ ಪ್ರಸಾರ ನಿಲ್ಲಿಸಿದೆ. ಕಳೆದ ವರ್ಷ ಆರಂಭವಾದ ಆ ಧಾರಾವಾಹಿ ಬಹುಬೇಗನೇ ಮುಗಿದದ್ದು ವೀಕ್ಷಕರಿಗೂ ಬೇಸರ ತಂದಿತ್ತು. ತಾವು ಇಷ್ಟಪಟ್ಟು ನೋಡುವ ಧಾರಾವಾಹಿಗಳು ಹಠಾತ್ತಾಗಿ ಮುಗಿದಿರುವ ಬೇಸರ ಇನ್ನು ಕೂಡಾ ವೀಕ್ಷಕರ ಮನದಲ್ಲಿ ಹಾಗೆಯೇ ಇದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಘವೇಂದ್ರರಾವ್ ರಾಜ್ಕುಮಾರ್ ನಿರ್ಮಾಣದ 'ಮರಳಿ ಬಂದಳು ಸೀತೆ' ಧಾರಾವಾಹಿ ಪ್ರಸಾರ ನಿಲ್ಲಿಸಿದ ನಂತರ ಇದೀಗ ಸಾಲು ಸಾಲು ಧಾರಾವಾಹಿಗಳು ಪ್ರಸಾರ ನಿಲ್ಲಿಸಲಿವೆ. ಪ್ರತಿದಿನ ರಾತ್ರಿ ಮನರಂಜನೆ ನೀಡುತ್ತಿದ್ದ ವರಲಕ್ಷ್ಮಿ ಸ್ಟೋರ್ಸ್, ಅರಮನೆ ಗಿಳಿ, ಸತ್ಯಂ ಶಿವಂ ಸುಂದರಂ, ಬಯಸದೆ ಬಳಿ ಬಂದೆ, ಯಜಮಾನಿ ಮತ್ತು ಇತ್ತೀಚೆಗಷ್ಟೇ ಆರಂಭವಾಗಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಗಳು ಕೂಡಾ ಮುಕ್ತಾಯಗೊಳ್ಳುತ್ತಿದೆ ಎನ್ನಲಾಗಿದೆ.