ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಮಹಾಭಾರತ'ವನ್ನು ನೋಡದವರಿಲ್ಲ. ಲಾಕ್ ಡೌನ್ ಸಮಯದಲ್ಲಿ ಆರಂಭವಾಗಿರುವ 'ಮಹಾಭಾರತ' ಧಾರಾವಾಹಿಯನ್ನು ನೋಡಲು ಮನೆಮಂದಿಯೆಲ್ಲಾ ಕಾತರದಿಂದ ಕಾಯುತ್ತಿರುತ್ತಾರೆ.
ಮಹಾಭಾರತದಲ್ಲಿ ಇದೀಗ ಕುರುಕ್ಷೇತ್ರ ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಮಹಾ ಸನ್ನಿವೇಶವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಿರುತೆರೆ ಪ್ರೇಕ್ಷಕರು ಸಜ್ಜಾಗಿದ್ದಾರೆ. ಇದರ ಜೊತೆಗೆ ಧಾರಾವಾಹಿಯಲ್ಲಿ ಆಗಸ್ಟ್ 19 ರಂದು ಪರಮಾತ್ಮ ಶ್ರೀಕೃಷ್ಣನ ವಿಶ್ವರೂಪ ದರ್ಶನ ವೀಕ್ಷಕರಿಗೆ ಆಗಲಿದೆ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನ ಸಾರಥಿಯಾಗಿ ಕಾಣಿಸಿಕೊಳ್ಳುವ ಶ್ರೀಕೃಷ್ಣ, ರಥವನ್ನು ಮುನ್ನಡೆಸಲಿದ್ದಾನೆ. ಯುದ್ಧದ ಸಮಯದಲ್ಲೂ ಅರ್ಜುನನ ಮನಸ್ಸಿನಲ್ಲಿ ಧರ್ಮ ಮತ್ತು ಅಧರ್ಮಗಳ ಕುರುತಾಗಿ ಮೂಡುವ ದ್ವಂಧ್ವಗಳಿಗೆ ಶ್ರೀಕೃಷ್ಣ ಪರಿಹಾರ ನೀಡುತ್ತಾನೆ.
ಅರ್ಜುನನಿಗೆ ಗೀತೋಪದೇಶ ಮಾಡುವ ಮೂಲಕ ಶ್ರೀಕೃಷ್ಣಆತನ ಮನಸ್ಸಿನಲ್ಲಿನ ದ್ವಂಧ್ವಗಳನ್ನು ನಿವಾರಿಸುತ್ತಾನೆ. ಇದರ ಜೊತೆಗೆ ಅರ್ಜುನನಿಗೆ ಪರಮಾತ್ಮ ಶ್ರೀಕೃಷ್ಣನ ವಿಶ್ವರೂಪ ದರ್ಶನವಾಗಲಿದ್ದು ಆ ಸಂಚಿಕೆ ಇಂದು ಪ್ರಸಾರವಾಗಲಿದೆ. ಶ್ರೀಕೃಷ್ಣ ಅರ್ಜುನನಿಗೆ ತನ್ನಲ್ಲಿ ಅಡಗಿರುವ ಬ್ರಹ್ಮಾಂಡವನ್ನು ತೋರಿಸುವ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದ್ದು ಅದನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.