ಕೊರೊನಾ ಜನರ ಆರೋಗ್ಯ ಮಾತ್ರವಲ್ಲ ಅವರನ್ನು ಮಾನಸಿಕವಾಗಿ ಹಾಗೂ ಆರ್ಥಿಕವಾಗಿಯೂ ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಕೆಲವೊಂದು ಉದ್ಯಮಗಳು ಬಹಳ ನಷ್ಟ ಅನುಭವಿಸುತ್ತಿವೆ. ಬೇಗನೆ ಕೊರೊನಾ ಸಮಸ್ಯೆಗಳೆಲ್ಲಾ ಬಗೆಹರಿಯಲಿ ಎಂದು ದಿನನಿತ್ಯ ಪ್ರಾರ್ಥಿಸುವಂತೆ ಆಗಿದೆ.

ಕಿರುತೆರೆ ಜಗತ್ತು ಕೂಡಾ ಇದಕ್ಕೆ ಹೊರತಲ್ಲ. ಈಗಾಗಲೇ ಹಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಕೆಲವು ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಟಿವಿ ಕಲಾವಿದರು ಕೆಲಸ ಮಾಡುತ್ತಿದ್ದರೂ ಕೂಡಾ ಅವರ ಸಂಬಳಕ್ಕೆ ಕತ್ತರಿ ಬೀಳುತ್ತಿದೆ. ಈ ಬಗ್ಗೆ ಕನ್ನಡ ಕಿರುತೆರೆ ಕಲಾವಿದರ ಅಭಿಪ್ರಾಯ ಹೀಗಿದೆ. ಇಂದು ನನ್ನ ಸುತ್ತಮುತ್ತ ಹಲವಾರು ಮಂದಿ ಕೆಲಸ ಕಳೆದುಕೊಂಡಿರುವುದನ್ನು ನೋಡುತ್ತಿದ್ದೇನೆ. ಇಂತಹ ಕಷ್ಟದ ಸಮಯದಲ್ಲಿ ನನಗೆ ಕೆಲಸ ಇದೆ. ಸಂಭಾವನೆ ಸಿಗುತ್ತಿದೆ ಎನ್ನುವುದು ಸ್ವಲ್ಪ ಸಮಾಧಾನದ ಸಂಗತಿ ಎನ್ನುತ್ತಾರೆ ಕನ್ನಡತಿಯ ಭುವನೇಶ್ವರಿ ರಂಜನಿ ರಾಘವನ್.

ನನ್ನ ಜೊತೆಗೆ ಗಟ್ಟಿಮೇಳದ ಇತರ ಕಲಾವಿದರಿಗೂ 25% ಸಂಬಳ ಕಡಿತ ಆಗುತ್ತಿದೆ. ಆದರೆ ಇದಕ್ಕೆ ಎಲ್ಲರೂ ಒಪ್ಪಿಕೊಳ್ಳಲಿಲ್ಲ. ಈ ಲಾಕ್ ಡೌನ್ ಎಲ್ಲರನ್ನೂ ತೊಂದರೆಗೆ ತಳ್ಳಿದೆ. ಮಾತ್ರವಲ್ಲ ನಿರ್ಮಾಪಕ ಹಾಗೂ ನಿರ್ದೇಶಕರ ಕಷ್ಟ ನನಗೂ ಅರ್ಥವಾಗುತ್ತದೆ. ಅದೇ ಕಾರಣದಿಂದ ಕೆಲವು ದಿನಗಳ ಕಾಲ ನಾನು ಕಡಿಮೆ ಸಂಭಾವನೆ ತೆಗೆದುಕೊಳ್ಳಲು ನಿರ್ಧರಿಸಿದ್ಧೇನೆ ಎನ್ನುತ್ತಾರೆ ಗಟ್ಟಿಮೇಳದ ವೇದಾಂತ್ ಪಾತ್ರಧಾರಿ ರಕ್ಷ್.

ಕನ್ನಡ ಕಿರುತೆರೆಯಲ್ಲಿ ಇದೀಗ ಡಬ್ಬಿಂಗ್ ಸೀರಿಯಲ್ಗಳದ್ದೇ ಕಾರುಬಾರು. ಇಂತಹ ಕಷ್ಟದ ಸಂದರ್ಭದಲ್ಲೂ ನನಗೆ ಕೆಲಸ ಇರುವುದಕ್ಕೆ ಖುಷಿ ಇದೆ. ಇನ್ನು ನನ್ನ ಸಂಭಾವನೆ ಕೂಡಾ ಕಟ್ ಆಗುತ್ತಿದೆ. ಅದೇ ಕಾರಣದಿಂದ ನಾನು ಹಣದ ವಿಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದೇನೆ. ಒಬ್ಬರಿಗೆ ಇಬ್ಬರಿಗೆ ಮಾತ್ರವಲ್ಲ ಬಹುತೇಕ ಎಲ್ಲಾ ಟಿವಿ ಕಲಾವಿದರಿಗೂ ಆರ್ಥಿಕ ಸಮಸ್ಯೆ ಇದೆ ಎಂದಿದ್ಧಾರೆ ಸೀತಾವಲ್ಲಭ ಧಾರಾವಾಹಿಯ ಆರ್ಯ ಅಲಿಯಾಸ್ ಜಗನ್ ಚಂದ್ರಶೇಖರ್.