ನ್ಯೂಮರಾಲಜಿ ಪ್ರಕಾರ ಹೆಸರು ಬದಲಿಸಿಕೊಳ್ಳುವುದು ಈಗ ಟ್ರೆಂಡ್ ಆಗಿದೆ. ಇತ್ತೀಚೆಗಷ್ಟೇ ಗಟ್ಟಿಮೇಳ ಖ್ಯಾತಿಯ ರಕ್ಷ್, ತಮ್ಮ ಹೆಸರು ಬದಲಿಸಿಕೊಂಡದ್ದು ತಿಳಿದೇ ಇದೆ. ಈಗ ಕಲರ್ಸ್ ಕನ್ನಡದ 'ಮನೆದೇವ್ರು' ಧಾರಾವಾಹಿಯಲ್ಲಿ ಪ್ರೀತಿ ಆಗಿ ನಟಿಸಿದ್ದ ಆಶಿಕಾ ಗೌಡ ಕೂಡಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.
![Small screen actress Arohi gowda](https://etvbharatimages.akamaized.net/etvbharat/prod-images/kn-bng-03-ashikagowda-namechange-video-ka10018_01092020123615_0109f_1598943975_945.jpg)
ಹೆಸರು ಬದಲಿಸಿಕೊಂಡಿರುವ ವಿಚಾರವನ್ನು ಆಶಿಕಾ ಅವರೇ ಹೇಳಿಕೊಂಡಿದ್ದಾರೆ. ನಾನು ಹೆಸರು ಬದಲಿಸಿಕೊಂಡಿದ್ದೇನೆ. ಹುಟ್ಟಿದ ದಿನಾಂಕಕ್ಕೂ ನನ್ನ ಹೆಸರಿಗೂ ಹೊಂದುತ್ತಿರಲಿಲ್ಲ. ಆದ್ದರಿಂದ ನನ್ನ ಹೆಸರನ್ನು ಆರೋಹಿ ಗೌಡ ಎಂದು ಬದಲಿಕೊಂಡಿದ್ದೇನೆ ಎಂದು ನಟಿ ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಾಯಕಿ ಮೀರಾ ಗೆಳತಿ ಆಗಿ ನಟಿಸುತ್ತಿರುವ ಆರೋಹಿ ಅವರಿಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬುದೇ ಬಹು ದೊಡ್ಡ ಆಸೆ ಆಗಿತ್ತು. ಅದೇ ಕಾರಣದಿಂದ ಹೆಚ್ಚು ಧಾರಾವಾಹಿ, ಸಿನಿಮಾಗಳನ್ನು ಆಕೆ ನೋಡುತ್ತಿದ್ದರಂತೆ. ಮಾತ್ರವಲ್ಲ ಟಿವಿಯಲ್ಲಿ ಬರುತ್ತಿದ್ದ ಡೈಲಾಗ್ಗಳನ್ನು ನಾನು ಹೇಳಿದರೆ ಹೇಗಿರುತ್ತದೆ ಎಂದು ಪರೀಕ್ಷಿಸಲು ಕನ್ನಡಿ ಮುಂದೆ ನಿಂತು ಅನುಕರಿಸುತ್ತಿದ್ದರಂತೆ.
ನಟನೆ ಮೇಲೆ ಸಾಕಷ್ಟು ವ್ಯಾಮೋಹ ಇರಿಸಿಕೊಂಡಿರುವ ಆರೋಹಿ, 'ರಂಗೋಲಿ' ಧಾರಾವಾಹಿಯಲ್ಲಿ ಪ್ರೆಸ್ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ನಂತರ ಪಾಪ ಪಾಂಡು, ಪಾಂಡುರಂಗ ವಿಠ್ಠಲ, ಆತ್ಮಕಥೆಗಳು, ಪಾರ್ವತಿ ಪರಮೇಶ್ವರ, ಸಿಬಿಐ ಕರ್ನಾಟಕ, ಶಾಂತಂ ಪಾಪಂ, ಸಿಂಧೂರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
![Small screen actress Arohi gowda](https://etvbharatimages.akamaized.net/etvbharat/prod-images/kn-bng-03-ashikagowda-namechange-video-ka10018_01092020123615_0109f_1598943975_875.jpg)
ಕಲರ್ಸ್ ಕನ್ನಡ ವಾಹಿನಿಯ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕಿಯ ಅಕ್ಕನಾಗಿ ಆರೋಹಿ, ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು. 'ಮಂಡ್ಯದ ಹುಡುಗರು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಆರೋಹಿ, ಬಹುಭಾಷಾ ಸಿನಿಮಾ 'ತ್ರಿಬಾಹು'ವಿನಲ್ಲಿ ಖಳನಾಯಕಿಯಾಗಿ ಕೂಡಾ ನಟಿಸಿದ್ದಾರೆ.
![Small screen actress Arohi gowda](https://etvbharatimages.akamaized.net/etvbharat/prod-images/kn-bng-03-ashikagowda-namechange-video-ka10018_01092020123615_0109f_1598943975_536.jpg)