'ಜೀವ ಹೂವಾಗಿದೆ' ಎನ್ನುತ್ತಾ ಕಿರುತೆರೆ ವೀಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ ಮಾನಸ ಸರೋವರದ ಸುಂದರ ಚೆಲುವೆ. ಇದಕ್ಕೂ ಮುನ್ನ ಫಿಟ್ನೆಸ್ ಟ್ರೈನರ್ ಆಗಿದ್ದ ಮುದ್ದು ಮುಖದ ಕುವರಿ ಇದೀಗ ಜನಪ್ರಿಯ ಕಿರುತೆರೆ ನಟಿ. ಆಕೆ ಬೇರಾರೂ ಅಲ್ಲ, 'ಮಾನಸ ಸರೋವರ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಮನೆ ಮಾತಾಗಿರುವ ಶಿಲ್ಪಾ ರವಿ.
ತಮಿಳು ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ಶಿಲ್ಪಾ ಮತ್ತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಕನ್ನಡ ಕಿರುತೆರೆಯಲ್ಲೇ. ಶ್ರೀನಿವಾಸ ಕಲ್ಯಾಣ, ಸಪ್ತಮಾತೃಕಾ, ನಾಗಿಣಿ, ಮಾನಸ ಸರೋವರ ಧಾರಾವಾಹಿಗಳಲ್ಲಿ ನಟಿಸಿರುವ ಶಿಲ್ಪಾ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಮಧುಮಿತಾ ಆಗಿ ಅಭಿನಯಿಸಲಿದ್ದಾರೆ. ಅರಳು ಹುರಿದಂತೆ ಚಟಪಟ ಎಂದು ಮಾತನಾಡುವ ಈ ಚೆಲುವೆಗೆ ಯಾರೂ ಗಾಡ್ ಫಾದರ್ಗಳಿಲ್ಲ. ಬದಲಿಗೆ ಸ್ವಂತ ಪರಿಶ್ರಮದಿಂದಲೇ ಅವರು ಇಂದು ನಟನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಎಂದರೆ ತಪ್ಪಿಲ್ಲ. ನಟಿಯಾಗಿ ಪರಿಚಿತರಾಗುವ ಮೊದಲು ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿದ್ದ ಈ ಚೆಲುವೆ ಇದೀಗ ನಟನೆಯೇ ನನ್ನ ಜೀವನದ ಭಾಗ ಎನ್ನುತ್ತಾರೆ.
'ನಿನ್ನ ಕೆಲಸ ಏನಿದೆಯೋ ಅದನ್ನು ನೀನು ನಿಶ್ಚಿಂತೆಯಿಂದ ಮಾಡು. ದುಡ್ಡು ಮತ್ತು ಹೆಸರು ಅದಾಗಿಯೇ ಅರಸಿಕೊಂಡು ನಿನ್ನ ಬಳಿ ಬರುತ್ತದೆ' ಎಂಬ ಅನುಭವ ನಟನಾ ಕ್ಷೇತ್ರ ನನಗೆ ಕಲಿಸಿದೆ ಎನ್ನುವ ಶಿಲ್ಪಾ, ನಿಜ ಜೀವನದಲ್ಲಿ ಟಾಮ್ ಬಾಯ್ ಸ್ವಭಾವದ ಹುಡುಗಿ. ಜೀನ್ಸ್, ಶರ್ಟ್, ಶೂ ಇವೆಲ್ಲಾ ನನ್ನ ಫೇವರಿಟ್ ಎನ್ನುವ ಚೆಲುವೆಗೆ ಸೀರೆ, ಚೂಡಿದಾರ್ಗಳೆಂದರೆ ಅಲರ್ಜಿ. ಅಯ್ಯೋ ಅವುಗಳನ್ನು ಧರಿಸಿ ಮ್ಯಾನೇಜ್ ಮಾಡುವುದೇ ಹರಸಾಹಸ ಎನ್ನುತ್ತಿದ್ದ ಶಿಲ್ಪಾ, ಧಾರಾವಾಹಿಗೆ ಬಂದ ನಂತರ ಸಾಕಷ್ಟು ಬದಲಾಗಿದ್ದಾರೆ. ಧಾರಾವಾಹಿಗಳಲ್ಲಿ ಸೀರೆ, ಲಂಗದಾವಣಿ, ಚೂಡಿದಾರ್ಗಳನ್ನೇ ಧರಿಸಬೇಕು. ಈ ಬಗ್ಗೆ ಮೊದಮೊದಲು ಕಷ್ಟ ಪಟ್ಟು ಧರಿಸುತ್ತಿದ್ದ ಈಕೆ ಇದೀಗ ಇವೆಲ್ಲವನ್ನೂ ಇಷ್ಟ ಪಡಲು ಆರಂಭಿಸಿದ್ದಾರೆ. ಸ್ಮೈಲ್ ಪ್ಲೀಸ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕೂಡಾ ಪಾದಾರ್ಪಣೆ ಮಾಡಿರುವ ಶಿಲ್ಪಾ 'ದಯವಿಟ್ಟು ಗಮನಿಸಿ', 'ನಾವು ಭಾಗ್ಯವಂತರು' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.