ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪಾರು'ವಿನ ಪ್ರತಿಯೊಂದು ಪಾತ್ರವೂ ಫೇಮಸ್. ಅನುಷ್ಕಾ ಪಾತ್ರವೂ ಅಷ್ಟೇ! ಇದರಲ್ಲಿ ಅನುಷ್ಕಾ ಎಂಬ ನೆಗೆಟಿವ್ ರೋಲ್ನಲ್ಲಿ ನಟಿಸಿ ಮನೆ ಮಾತಾಗಿರುವ ಮುದ್ದು ಮುಖದ ಬೆಡಗಿ ಹೆಸರು ಮಾನ್ಸಿ ಜೋಷಿ.
ಚಿಕ್ಕಂದಿನಿಂದಲೇ ನೃತ್ಯದತ್ತ ಒಲವು ಹೊಂದಿದ್ದ ಮಾನ್ಸಿ, ಸಣ್ಣ ಪ್ರಾಯದಲ್ಲಿಯೇ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. ಮುಂದೆ ಮನೆಯವರ ಒಪ್ಪಿಗೆ ಪಡೆದು ಶಾಸ್ತ್ರೋಕ್ತವಾಗಿ ವಿಂದ್ಯಾ ಶ್ರೀನಾಥ್ ಅವರ ಬಳಿ ನೃತ್ಯ ಕಲಿಯಲಾರಂಭಿಸಿದರು. ನಂತರ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಕೂಡಾ ಪಾಸಾದರು. ಸುಮಾರು ಇನ್ನೂರು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿರುವ ಮಾನ್ಸಿಗೆ ನಾನ್ಯಾಕೆ ನಟಿಸಬಾರದೆಂಬ ಆಲೋಚನೆ ಮೂಡಿತು.
ಅದಕ್ಕೆ ಕಾರಣ ಏನಂತೀರಾ?: ಭರತನಾಟ್ಯ ಕಲಿತವರಿಗೆ ನಟಿಸುವುದು ತುಂಬಾ ಸುಲಭ. ಮುಖ್ಯವಾಗಿ ಅವರಿಗೆ ಸ್ಟೇಜ್ ಫಿಯರ್ ಇರುವುದಿಲ್ಲ. ಜೊತೆಗೆ ಭರತನಾಟ್ಯ ಕಲಾವಿದರಿಗೆ ನವರಸವನ್ನು ಸಲೀಸಾಗಿ ವ್ಯಕ್ತಪಡಿಸಲು ಸಾಧ್ಯ. ನಟಿಯಾಗಬೇಕು ಎಂಬ ಹಂಬಲ ಮೂಡಿದ್ದೇ ತಡ ಹೆತ್ತವರ ಒಪ್ಪಿಗೆ ಪಡೆದು, ಆಡಿಶನ್ನಲ್ಲಿ ಭಾಗವಹಿಸಿದ್ದರು. ಅಂತೆಯೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಿಳಿ ಹೆಂಡ್ತಿ' ಧಾರಾವಾಹಿಯ ಆಡಿಶನ್ಗೆ ತೆರಳಿದ್ದ ಮಾನ್ಸಿಗೆ, ವಾಹಿನಿಯೊಂದರಿಂದ ಕರೆ ಬಂದಾಗ ಆಶ್ಚರ್ಯ. ಹಾಗೇ ಅವರು ಹೋಗಿ ಸೆಲೆಕ್ಟ್ ಆಗಿದ್ದು ರಮ್ಯಾ ಎಂಬ ನೆಗೆಟಿವ್ ಪಾತ್ರಕ್ಕೆ!ಮೊದಲ ಧಾರಾವಾಹಿಯಲ್ಲೇ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನ್ಸಿಗೆ ಇಂತಹುದ್ದೇ ಪಾತ್ರ ಬೇಕು ಎಂದೇನಿರಲಿಲ್ಲ. ಬದಲಿಗೆ ಜನ ಗುರುತಿಸುವಂತಹ ಪಾತ್ರ ಬೇಕು ಎಂಬ ಆಸೆಯಿತ್ತು. ಅದು ನನಸಾಯಿತು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾ ಪಾತ್ರಧಾರಿಯಾಗಿ ಮಿಂಚುತ್ತಿರುವ ಮಾನ್ಸಿಗೆ ಏಕಕಾಲದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಕ್ಕೆ ಜೀವ ತುಂಬುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಅವಕಾಶ ದೊರೆತ ಬೆಳ್ಳಿತೆರೆಗೆ ಕಾಲಿಡಲೂ ತಯಾರಿದ್ದೇನೆ ಎಂದು ಹೇಳಿದ್ದಾರೆ. ಈ ಚೆಲುವೆಗೆ ನಟನಾ ಮತ್ತು ನೃತ್ಯ ಸಂಸ್ಥೆ ತೆರೆಯುವ ಬಹುದೊಡ್ಡ ಕನಸಿದೆ. ಮುಖ್ಯವಾಗಿ ನೃತ್ಯ ನಟನೆ ಕಲಿಯುವ ಬಡ ಮಕ್ಕಳಿಗೆ ಉಚಿತವಾಗಿ ಕಲಿಸುವ ಬಯಕೆ. ಆದಷ್ಟು ಬೇಗ ಅವರ ಕನಸು ನನಸಾಗಲಿ ಎಂಬುದೇ ನಮ್ಮ ಹಾರೈಕೆ.