ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ'ಯಲ್ಲಿ ಖಳನಾಯಕಿ ಮಾಯಾಳಾಗಿ ನಟಿಸಿದ್ದ ಐಶ್ವರ್ಯಾ ಬಸ್ಪುರೆ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಧಾರಾವಾಹಿಯಲ್ಲಿ ಪ್ರಿಯಾ ಆಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ ಐಶ್ವರ್ಯಾ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಸತಿ ಧಾರಾವಾಹಿಯಲ್ಲಿ ನಾಯಕಿ ಆರತಿ ಆಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಐಶ್ವರ್ಯಾ ಬಸ್ಪುರೆ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಮಹಾಸತಿ ಧಾರಾವಾಹಿಯಲ್ಲಿ ಅಳುಮುಂಜಿ ವಿಧವೆ ಆಗಿ ನಟಿಸಿದ್ದ ಐಶ್ವರ್ಯಾ, ಮುಂದೆ ನಟಿಸಿದ್ದು ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಮಾಯಾ ಎನ್ನುವ ನೆಗೆಟಿವ್ ಶೇಡ್ನಲ್ಲಿ ನಟಿಸಿದ್ದ ಐಶ್ವರ್ಯಾ ಮುಂದೆ ಅದೇ ಪಾತ್ರದ ಮೂಲಕವೇ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಯಾರೇ ನೀ ಮೋಹಿನಿ ಧಾರಾವಾಹಿ ಮುಕ್ತಾಯವಾದ ಬಳಿಕ ಕಿರುತೆರೆಯಿಂದ ದೂರವಿದ್ದ ಐಶ್ವರ್ಯಾ ಇದೀಗ ಸಂಘರ್ಷ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ.