ಸ್ಯಾಂಡಲ್ ವುಡ್ ನಟ ವಿನಾಯಕ್ ಜೋಷಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರು ತಮ್ಮ ಬಾಲ್ಯದ ಗೆಳತಿ ವರ್ಷಾ ಬೆಳವಾಡಿ ಜೊತೆ ಸಪ್ತಪದಿ ತುಳಿಯುವುದಕ್ಕೆ ಸಜ್ಜಾಗಿದ್ದಾರೆ.
ಹೌದು, ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ವಿನಾಯಕ್ ಜೋಶಿ- ವರ್ಷಾ ಈಗ ಮದುವೆಯಾಗಲು ತೀರ್ಮಾನಿಸಿದ್ದಾರೆ. ಕರ್ನಾಟಕದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ವರ್ಷಾ ಸದ್ಯ ಬ್ಯಾಡ್ಮಿಂಟನ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿನಾಯಕ್ ಜೋಷಿ ತಂದೆ ಹಾಗೂ ವರ್ಷಾ ತಂದೆ ಸ್ನೇಹಿತರಾಗಿದ್ದು ಎರಡು ಕುಟುಂಬಗಳು ಸಹ ಈ ಜೋಡಿಯ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಆಗಸ್ಟ್ 25 ರಂದು ನನ್ನ ಹುಟ್ಟುಹಬ್ಬ ಇದ್ದು, ಅದೇ ದಿನ ತುಂಬಾ ಸರಳವಾಗಿ ರೆಜಿಸ್ಟರ್ ಮ್ಯಾರೇಜ್ ಆಗಲು ಬಯಸಿದ್ದೆ. ಅದರೆ ಮನೆಯವರ ಆಸೆಯಂತೆ ಶಾಸ್ತ್ರೋಕ್ತವಾಗಿ ಅಡಂಬರವಿಲ್ಲದೆ ಸಿಂಪಲ್ ಆಗಿ ಕುಟುಂಬದವರು ಹಾಗೂ ಅಪ್ತರ ಸಮ್ಮುಖದಲ್ಲಿ ಮದುವೆಯಾಗುವುದಾಗಿ ವಿನಾಯಕ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
1997 ರಲ್ಲಿ 'ನಮ್ಮೂರ ಮಂದಾರ ಹೂವೆ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ವಿನಾಯಕ್ ಜೋಷಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ 2006 ರಲ್ಲಿ 'ನನ್ನ ಕನಸಿನ ಹೂವೆ' ಚಿತ್ರದಲ್ಲಿ ನಾಯಕನಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಸದ್ಯಕ್ಕೆ ಜೋಶಿ ಸಿನಿಮಾಗಳಿಗಿಂತ ಹೆಚ್ಚಾಗಿ ವೆಬ್ ಸೀರೀಸ್ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.