ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದ 'ಜೀವ ಹೂವಾಗಿದೆ' ಧಾರಾವಾಹಿ 150 ಸಂಚಿಕೆಗಳನ್ನು ಪೂರೈಸಿದೆ. ಪ್ರೀತಿ, ದ್ವೇಷ, ಸಂಬಂಧಗಳ ಕಥೆಯನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ.
ನಾಯಕ ಮದನ್ ಹಾಗೂ ನಾಯಕಿ ಮಧು ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಅವರಿಬ್ಬರ ಕುಟುಂಬದ ಮಧ್ಯೆ ಇರುವ ದ್ವೇಷ ಇವರ ಪ್ರೀತಿಗೆ ಅಡ್ಡಿಯಾಗುತ್ತದೆ. ಆದರೂ ಇವರ ಪ್ರೀತಿಗೆ ಸೋತು ಮದುವೆ ನಿಶ್ಚಯ ಮಾಡುತ್ತಾರೆ. ಆದರೆ ಮದುವೆ ಹಿಂದಿನ ದಿನ ಮದನ್ ಆಕ್ಸಿಡೆಂಟ್ನಲ್ಲಿ ಸಾಯುತ್ತಾನೆ. ಒಂದು ಹುಡುಗಿಯ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಸೇರಿ ಮಧು ಮದುವೆ ಮದನ್ ತಮ್ಮ ವಿಶಾಲ್ ಜೊತೆ ಮಾಡುತ್ತಾರೆ. ಮದನ್ ಸಾವಿಗೆ ವಿಶಾಲ್ ಕಾರಣ ಎಂದು ನಂಬಿರುವ ಮಧು ಮನೆಯವರ ಒತ್ತಾಯಕ್ಕೆ ವಿಶಾಲ್ನನ್ನು ಮದುವೆಯಾದರೂ ಆತನನ್ನು ದ್ವೇಷಿಸುತ್ತಿರುತ್ತಾಳೆ.
ಮತ್ತೊಂದೆಡೆ ವಿಶಾಲ್ನನ್ನು ಪ್ರೀತಿಸುತ್ತಿದ್ದ ಅಂಜಲಿ ಆತನಿಗೆ ಮದುವೆಯಾಗಿರುವ ವಿಚಾರ ತಿಳಿದು ಶಾಕ್ ಆಗುತ್ತಾಳೆ. ಮಧು ಜೊತೆ ಮಾತನಾಡಿ ವಿಶಾಲ್ಗೆ ಡೈವೋರ್ಸ್ ನೀಡುವಂತೆ ಮನವಿ ಮಾಡುತ್ತಾಳೆ. ಮಧು ಕೂಡಾ ಇದಕ್ಕೆ ಒಪ್ಪಿ ಡೈವೋರ್ಸ್ಗೆ ಅಪ್ಲೈ ಮಾಡುತ್ತಾಳೆ. ಇಲ್ಲಿಂದ ಕಥೆ ಹೇಗೆ ಸಾಗಲಿದೆ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕು.
ಧಾರಾವಾಹಿಯಲ್ಲಿ ಸ್ಯಾಂಡಲ್ವುಡ್ ನಟಿ ಸುಧಾರಾಣಿ ಅಡ್ವೊಕೇಟ್ ಶಕುಂತಲಾ ಆಗಿ ನಟಿಸಿದ್ದಾರೆ. "ಜೀವ ಹೂವಾಗಿದೆ ಧಾರಾವಾಹಿ ಸಂಬಂಧಗಳ ಬಗ್ಗೆ ಹೇಳುತ್ತದೆ. ಕಥೆ ಕೇಳಿದಾಗ ಖುಷಿಯಾಯಿತು. ಅದೇ ಕಾರಣದಿಂದ ನಟಿಸಲು ಒಪ್ಪಿಕೊಂಡೆ. ಅಡ್ವೊಕೇಟ್ ಶಕುಂತಲಾ ಪಾತ್ರ ಈ ಯಾಂತ್ರಿಕ ಯುಗದಲ್ಲಿ ಕಳೆದುಹೋಗುತ್ತಿರುವ ಮೌಲ್ಯಗಳ ಕುರಿತು ಹೇಳುವಂತಹ ಪಾತ್ರವಾಗಿದೆ" ಎಂದು ಸುಧಾರಾಣಿ ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ. ಯಶಸ್ವಿ 150 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಈ ಧಾರಾವಾಹಿಯ ಶೀರ್ಷಿಕೆಯನ್ನು 'ನನ್ನ ನೀನು ಗೆಲ್ಲಲಾರೆ' ಸಿನಿಮಾದ ಜೀವ ಹೂವಾಗಿದೆ... ಹಾಡಿನಿಂದ ಆರಿಸಿಕೊಂಡಿರುವುದು ವಿಶೇಷ.