ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಧಾ ರಮಣ' ಕೂಡಾ ಒಂದು. ಮೂರು ವರ್ಷಗಳ ಕಾಲ ಪ್ರಸಾರ ಕಂಡಿದ್ದ ರಾಧಾ ರಮಣ ಧಾರಾವಾಹಿ ಮುಗಿದು ಒಂದು ವರ್ಷವಾಗುತ್ತಾ ಬಂತು. ಆದರೂ ಜನರು ಧಾರಾವಾಹಿ ಹಾಗೂ ಅದರಲ್ಲಿ ನಟಿಸಿದ ಕಲಾವಿದರನ್ನು ಮರೆತಿಲ್ಲ.
ಲಾಕ್ ಡೌನ್ ಸಮಯದಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ರಾಧಾ ರಮಣ' ಮರುಪ್ರಸಾರವಾಗಿತ್ತು. ಇದೀಗ ರಾಧಾ ರಮಣ ಧಾರಾವಾಹಿಯ ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದೆ. ವೀಕ್ಷಕರನ್ನು ಸೆಳೆಯಲು ಕಿರುತೆರೆಯಲ್ಲಿ ಆಗಾಗ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗುತ್ತಲೇ ಇರುತ್ತವೆ. ಅದೇ ರೀತಿ ಮಹಾ ಮಿಲನ ಕೂಡಾ ಒಂದು. ಈಗ ಪ್ರಸಾರವಾಗುತ್ತಿರುವ ಧಾರಾವಾಹಿ ತಂಡದ ಜೊತೆಗೆ ಹಳೆಯ ಧಾರಾವಾಹಿಗಳ ಕಲಾವಿದರು ಸೇರಿ ಮಹಾಮಿಲನ ಶೀರ್ಷಿಕೆಯಡಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.
ಒಂದರ್ಥದಲ್ಲಿ ಹೇಳಬೇಕೆಂದರೆ ಇದು ಡಬಲ್ ಧಮಾಕಾ. ಇತ್ತೀಚೆಗಷ್ಟೇ ನನ್ನರಸಿ ರಾಧೆ ಮತ್ತು ಅಗ್ನಿಸಾಕ್ಷಿ, ನಮ್ಮನೆ ಯುವರಾಣಿ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿಗಳ ಮಹಾಮಿಲನ ನಡೆದಿತ್ತು. ಇದೀಗ ರಾಧಾ ರಮಣ ಸರದಿ. ಉತ್ತರ ಕನ್ನಡದ ಸೊಬಗಿನ 'ಗಿಣಿರಾಮ' ಧಾರಾವಾಹಿಯ ಮಹಾಮಿಲನ ರಾಧಾ ರಮಣ ಧಾರಾವಾಹಿಯೊಂದಿಗೆ ಆಗಲಿದೆ. ಮುಂದಿನ ವಾರಾಂತ್ಯದಲ್ಲಿ ಇದು ಪ್ರಸಾರ ಕಾಣಲಿದೆ ಎನ್ನಲಾಗುತ್ತಿದೆ. ವಾಹಿನಿಯಿಂದ ಇದರ ಬಗ್ಗೆ ಅಧಿಕೃತ ಮಾಹಿತಿ ದೊರೆಯಬೇಕಿದೆ.