ಬಿಗ್‌ಬಾಸ್ 7 ಆವೃತ್ತಿಗೆ ಭಾಗವಹಿಸುತ್ತಿರುವವರ ಹೆಸರು ಒಂದೊಂದಾಗಿ ಹೊರ ಬೀಳುತ್ತಿದೆ. 15 ಮಂದಿಯಲ್ಲಿ ಈಗಾಗಲೇ ಐವರ ಹೆಸರು ಹೊರಬಿದ್ದಿದೆ. ಅದರ ಸಾಲಿಗೆ ಮತ್ತೊಬ್ಬರ ಹೆಸರು ಇಂದು ಕೇಳಿ ಬಂದಿದೆ. ಧಾರಾವಾಹಿಯೊಂದರಲ್ಲಿ ಮಿಸ್ ಎಂದು ಕರೆಸಿಕೊಳ್ಳುತ್ತಿದ್ದವರು ಇದೀಗ ಬಿಗ್‌ಬಾಸ್ ಮನೆಯಲ್ಲೂ ಪಾಠ ಮಾಡಲು ಹೋಗ್ತಾರ ಎಂಬ ಪ್ರಶ್ನೆ ಎದುರಾಗಿದೆ.
ರಾಧಾರಮಣ ಧಾರಾವಾಹಿಯ ರಾಧಾ ಮಿಸ್ ಆಗಿ ಮನ ಸೆಳೆದ ಮುದ್ದು ಮುಖದ ಚೆಲುವೆ ಶ್ವೇತಾ ಅವರು ಮತ್ತೊಮ್ಮೆ ನಿಮ್ಮ ಮುಂದೆ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಅರೆ..! ಶ್ವೇತ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದು ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ ನಿಮ್ಮ ಪ್ರೀತಿಯ ರಾಧಾ ಮಿಸ್ ಯಾವುದೇ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿಲ್ಲ. ಬದಲಿಗೆ ಅವರು ಬಿಗ್‌ಬಾಸ್-7 ಸ್ಪರ್ಧಿಯಾಗಿ ಹೋಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಇದು ನಿಜ ಆದಲ್ಲಿ ಇನ್ನು ಕೆಲವು ದಿನಗಳವರೆಗೆ ಪ್ರತಿದಿನ ರಾತ್ರಿ ರಾಧಾ ಮಿಸ್ ದರ್ಶನ ಆಗುವುದಂತೂ ನಿಜ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿ ಅಲಿಯಾಸ್ ಜಾನು ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಶ್ವೇತ ಸುಂದರಿ ಮೊದಲ ಧಾರಾವಾಹಿಯಲ್ಲೇ ಕಿರುತೆರೆ ವೀಕ್ಷಕರ ಮನ ಸೆಳೆದರು. ಮುಂದೆ ರಾಧಾರಮಣನ ಆರಾಧನಾ ಪಾತ್ರದಿಂದ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಜೊತೆಗೆ 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಶ್ವೇತಾ ಬಿಗ್‌ಬಾಸ್ ಮನೆಯೊಳಗೆ ಕಾಲಿಡುತ್ತಾರೆಯೇ ಎಂದು ಕಾದು ನೋಡಬೇಕು.