ಕೊರೊನಾ ವೈರಸ್ ಹಾವಳಿಯಿಂದಾಗಿ ಸಿನಿಮಾ ಹಾಗೂ ಕಿರುತೆರೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಚಿತ್ರೀಕರಣ ಕೂಡಾ ನಿಂತಿರುವ ಕಾರಣ ಧಾರಾವಾಹಿಯ ಫ್ರೆಶ್ ಎಪಿಸೋಡ್ಗಳು ಯಾವಾಗಲೋ ನಿಂತು ಹೋಗಿವೆ. ಆದರೆ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಹಳೆಯ ಧಾರಾವಾಹಿಗಳನ್ನು, ರಿಯಾಲಿಟಿ ಶೋ ಗಳನ್ನು ವಾಹಿನಿಗಳು ಮರು ಪ್ರಸಾರ ಮಾಡುತ್ತಿವೆ.

ಧಾರಾವಾಹಿಗಳ ಜೊತೆಗೆ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳು ಮರು ಪ್ರಸಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 4 ಕೂಡಾ ಮರು ಪ್ರಸಾರ ಕಾಣಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ವೀಕ್ಷಕರಿಗೆ ಲಭ್ಯವಾಗಲಿದೆ.

ಆರಾಮದಾಯಕ ಜೀವನಕ್ಕೆ ಒಗ್ಗಿಕೊಂಡಿದ್ದ ಪೇಟೆ ಬೆಡಗಿಯರು ಯಾವುದೇ ಸೌಲಭ್ಯ, ಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ಹೇಗೆ ವಾಸ ಮಾಡುತ್ತಾರೆ..? ನೀಡುವ ಸವಾಲುಗಳನ್ನೆಲಾ ಹೇಗೆ ಸ್ವೀಕರಿಸಿ ಗೆಲ್ಲುತ್ತಾರೆ..? ಎಂಬುದನ್ನು ನೀವು ಈ ಶೋನಲ್ಲಿ ನೋಡಬಹುದು. ಮಾತಿನ ಮಲ್ಲ ಅಕುಲ್ ಬಾಲಾಜಿ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಶೋನಲ್ಲಿ ಮೆಬಿನಾ ಮೈಕೆಲ್, ಅಭಿಜ್ಞಾ ಭಟ್, ಪ್ರಿಯಾಂಕಾ ಶಹಾನ್ , ಪೂನಮ್ ಸೇರಿ 12 ಮಂದಿ ಸ್ಪರ್ಧಿಗಳಿದ್ದರು. ಎಪಿಸೋಡ್ 4 ರಲ್ಲಿ ಮೆಬಿನಾ ಮೈಕೆಲ್ ವಿಜೇತರಾಗಿದ್ದು ಅವರಿಗೆ 7 ಲಕ್ಷ ರೂಪಾಯಿ ಬಹುಮಾನ ದೊರಕಿತ್ತು.