ಕರ್ನಾಟಕದ ಶ್ರೀಮಂತ ಜೀವವೈವಿಧ್ಯತೆಯ ಬಗ್ಗೆ ತಿಳಿಸುವ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಪ್ರಸಾರ ಆಗುವ ದಿನ ಬಂದೇ ಬಿಡ್ತು. ಇಂದು ರಾತ್ರಿ 8 ಗಂಟೆಗೆ ಅನಿಮಲ್ ಪ್ಲಾನೆಟ್ ಹಾಗೂ ಡಿಸ್ಕವರಿ ಚಾನಲ್ನಲ್ಲಿ ಈ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.
ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ, ಡಿಸ್ಕವರಿ ಚಾನಲ್ ನಿರ್ಮಾಣ ಮಾಡಿರುವ, ಈ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ಬಿಂಗ್ ಆಗಿದೆ. ಇಂದು ಪರಿಸರ ದಿನದ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಈ ಸಾಕ್ಷ್ಯಚಿತ್ರದ ರೂವಾರಿಗಳಿಗೆ ಮರೆಯಲಾರದ ಉಡುಗೊರೆ ನೀಡಿದ್ದಾರೆ. 'ವೈಲ್ಡ್ ಕರ್ನಾಟಕ' ನಿರ್ದೇಶಕರಾದ ಅಮೋಘವರ್ಷ ಜೆ.ಎಸ್ , ಕಲ್ಯಾಣ್ ವರ್ಮಾ, ಶರತ್ ಚಂಪಾತಿ, ವಿಜಯ್ ಮೋಹನ್ ರಾಜ್ ಅವರನ್ನು ಪುನೀತ್ ರಾಜ್‍ಕುಮಾರ್ ತಮ್ಮ ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ.
'ವೈಲ್ಡ್ ಕರ್ನಾಟಕ' ನಮ್ಮ ರಾಜ್ಯದಲ್ಲಿರುವ ಅರಣ್ಯ ಹಾಗೂ ವನ್ಯಜೀವಿಗಳ ವಿಚಾರ ಒಳಗೊಂಡ ಅದ್ಭುತ ಸಾಕ್ಷ್ಯಚಿತ್ರ ಎಂಬ ಕಾರಣಕ್ಕೆ, ಪುನೀತ್ ರಾಜ್‍ಕುಮಾರ್ ಅವರು ಅಮೋಘ ವರ್ಷ ಹಾಗೂ ಕಲ್ಯಾಣ್ ವರ್ಮಾ ಅವರ ಜೊತೆ ಮಾತನಾಡಿ, ಈ ಸಾಕ್ಷ್ಯಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ್ದಾರೆ. ಹಾಗೇ ಈ ಸಾಕ್ಷ್ಯಚಿತ್ರವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಮನವಿ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಸ್ಟಾರ್ ನಟರಾಗಿದ್ದರೂ ನಮ್ಮನ್ನು ಗುರುತಿಸಿ ಗೌರವಿಸಿರುವುದು ಸಂತೋಷ ತಂದಿದೆ ಎಂದು ಅಮೋಘವರ್ಷ ಹೇಳಿಕೊಂಡಿದ್ದಾರೆ.