ಇತ್ತೀಚೆಗೆ ಹಲವು ಸಿನಿಮಾ ತಾರೆಯರು ಕಿರುತೆರೆ ಕಾರ್ಯಕ್ರಮ ಮತ್ತು ಧಾರಾವಾಹಿಗಳಲ್ಲಿ ತಮ್ಮನ್ನು ತೊಡಗಿಕೊಳ್ಳುತ್ತಿದ್ದಾರೆ. ಇದೀಗ ನಟಿ ಪ್ರಿಯಾಂಕ ಉಪೇಂದ್ರ ಅವರ ಸರದಿ. ಪ್ರಿಯಾಂಕ ಇತ್ತೀಚೆಗೆ ಬಿಡುಗಡೆಯಾದ ‘ದೇವಕಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.
ಇದೀಗ ಪ್ರಿಯಾಂಕ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ನಾನು ನನ್ನ ಕನಸು’ ಧಾರಾವಾಹಿಯನ್ನು ಜನರಿಗೆ ಅರ್ಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆಗಸ್ಟ್ 5ರಿಂದ ‘ನಾನು ನನ್ನ ಕನಸು’ ಪ್ರಸಾರ ಆಗಲಿದೆ. ತಂದೆ - ಮಗಳ ನಡುವಿನ ಅಪರೂಪದ ಬಾಂಧವ್ಯದ ಕಥೆ ಈ ಧಾರಾವಾಹಿಯಲ್ಲಿ ಇರಲಿದ್ದು, ಮುಖ್ಯಭೂಮಿಕೆಯಲ್ಲಿ ರಾಜೇಶ್ ನಟರಂಗ ಅಭಿನಯಿಸುತ್ತಿದ್ದಾರೆ. ಈಗಾಗಲೇ ಬಿತ್ತರಗೊಳ್ಳುತ್ತಿರುವ ಪ್ರೋಮೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ, ‘ನಾನು ನನ್ನ ಕನಸು’ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ‘ಈ ಹಿಂದೆ ನಾನು ‘ಇಷ್ಟದೇವತೆ’ ಧಾರಾವಾಹಿಯ ಒಂದು ಸಂಚಿಕೆಯಲ್ಲಿ ಅತಿಥಿ ಪಾತ್ರ ಮಾಡಿದ್ದೆ. ಈಗ ಈ ಹೊಸ ಧಾರಾವಾಹಿಯನ್ನು ಅರ್ಪಿಸುತ್ತಿದ್ದೇನೆ. ಇಂತಹ ಪ್ರಯತ್ನ ಎಲ್ಲೆಡೆ ಟ್ರೆಂಡ್ ಆಗುತ್ತಿದೆ.
- " class="align-text-top noRightClick twitterSection" data="">
‘ನಾನು ನನ್ನ ಕನಸು’ ಕಥೆ ನನಗೆ ತುಂಬ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ. ಮುಂದಿನ ದಿನಗಳಲ್ಲಿ ಕೆಲವು ಎಪಿಸೋಡ್ಗಳಲ್ಲೂ ನಟಿಸಲಿದ್ದೇನೆ’ ಎನ್ನುತ್ತಾರೆ ಪ್ರಿಯಾಂಕ. ಈ ಧಾರಾವಾಹಿಗೆ ಸಂಬಂಧಿಸಿದಂತೆ ಅವರು ಕಾಣಿಸಿಕೊಳ್ಳಲಿರುವ ಎಲ್ಲ ದೃಶ್ಯಗಳಿಗೂ ಸ್ವತಃ ಪ್ರಿಯಾಂಕ ಡಬ್ ಮಾಡಿದ್ದಾರೆ. ಇದು ಅವರಿಗೆ ಹೊಸ ಅನುಭವ. ಈವರೆಗೂ ಯಾವುದೇ ಚಿತ್ರದಲ್ಲೂ ಅವರು ಡಬ್ ಮಾಡಿಲ್ಲ. ‘ಮೊದಲ ಬಾರಿಗೆ ಡಬ್ ಮಾಡುತ್ತಿರುವುದರಿಂದ ಆರಂಭದಲ್ಲಿ ನನಗೆ ಸ್ವಲ್ಪ ಭಯ ಇತ್ತು. ಆದರೆ, ಈಗ ಚೆನ್ನಾಗಿ ಮೂಡಿ ಬಂದಿರುವುದರಿಂದ ವಾಹಿನಿಯವರು ನನ್ನ ಧ್ವನಿಯನ್ನೇ ಉಳಿಸಿಕೊಂಡರು. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾದಲ್ಲೂ ನನ್ನ ಪಾತ್ರಕ್ಕೆ ನಾನೇ ಧ್ವನಿ ನೀಡಲು ಪ್ರಯತ್ನಿಸಬಹುದು ಎಂಬ ಆತ್ಮವಿಶ್ವಾಸ ಮೂಡಿದೆ’ ಎಂದಿದ್ದಾರೆ ಪ್ರಿಯಾಂಕ.