ಹಿರಿತೆರೆ ಮೂಲಕ ಬಣ್ಣದ ಯಾನ ಆರಂಭಿಸಿದ ಈ ಚೆಲುವೆ ಖ್ಯಾತಿಯಾಗಿದ್ದು ಮಾತ್ರ ಕಿರುತೆರೆಗೆ ಬಂದ ನಂತರವೇ. ಅವರೇ ಕಿರುತೆರೆಯ ರಂಗನಾಯಕಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಂಗನಾಯ'ಕಿ ಧಾರಾವಾಹಿಯಲ್ಲಿ ನಾಯಕಿ ನಕ್ಷತ್ರ ಆಗಿ ಮನೆ ಮಾತಾಗಿರುವ ಮುದ್ದು ಮುಖದ ಸುಂದರಿಯ ಹೆಸರು ಪ್ರೇರಣಾ ಕಂಬಂ.
ಪ್ರೇರಣಾ ಇಂದು ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಅವರ ಸಂಬಂಧಿಯೇ ಮೂಲ ಕಾರಣ. ಪ್ರೇರಣಾ ಸಂಬಂಧಿ ರಮ್ಯಾ ಯಶೋಧೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದರಲ್ಲಿ ಪ್ರೇರಣಾಗೆ ಕೂಡಾ ಒಂದು ಪಾತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಧಾರಾವಾಹಿಯಲ್ಲಿ ನಟಿಸಲು ಪ್ರೇರಣಾ ಕೂಡಾ ಒಪ್ಪಿಕೊಂಡರು. ಆಡಿಷನ್ನಲ್ಲಿ ಆಯ್ಕೆ ಕೂಡಾ ಆದರು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಪೌರಾಣಿಕ ಧಾರಾವಾಹಿ 'ಹರಹರ ಮಹಾದೇವ' ದಲ್ಲಿ ನಾಯಕಿ ಸತಿಯ ಅಕ್ಕ, ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರೇರಣಾ ಕಂಬಂ ಮತ್ತೆ 'ಚೂರಿಕಟ್ಟೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದರು. 'ಚೂರಿಕಟ್ಟೆ'ಯ ಮೂಲಕ ಸಿನಿರಂಗದಲ್ಲಿ ಛಾಪು ಮೂಡಿಸಿದ್ದ ಚೆಂದುಳ್ಳಿ ಚೆಲುವೆ ಪ್ರೇರಣಾ ಮನೆ ಮಾತಾಗಿದ್ದು ಕಿರುತೆರೆಗೆ ಬಂದ ನಂತರ. 'ರಂಗನಾಯಕಿ' ಧಾರಾವಾಹಿಯಲ್ಲಿ ಕಳ್ಳಿ ಬಂಗಾರಿಯಾಗಿ ಎಂಟ್ರಿ ಕೊಟ್ಟ ಸುಂದರಿ ಮತ್ತೆ ನಕ್ಷತ್ರ ಆಗಿ ಬದಲಾಗಿದ್ದಾರೆ. ತಮ್ಮ ಅಭಿನಯದಿಂದ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಪ್ರೇರಣಾ ಸದ್ಯಕ್ಕೆ ಕಿರುತೆರೆಯಲ್ಲಿ ಸಖತ್ ಬ್ಯುಸಿ.