ಸೆಪ್ಟೆಂಬರ್ 7 ರಂದು ಬೆಳಗ್ಗೆ 60 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಹಿರಿಯ ನಟ ಸಿದ್ದರಾಜ ಕಲ್ಯಾಣ್ಕರ್ ಅಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಬೇಸರಿಂದ ಇದೀಗ 'ಪ್ರೇಮಲೋಕ' ಧಾರಾವಾಹಿ ತಂಡ ತಾತ್ಕಾಲಿಕವಾಗಿ ಚಿತ್ರೀಕರಣ ನಿಲ್ಲಿಸಿದೆ.

'ಪ್ರೇಮಲೋಕ'ದಲ್ಲಿ ನಾಯಕನ ಅಜ್ಜನಾಗಿ ಅಭಿನಯಿಸಿದ್ದ ಸಿದ್ದರಾಜ್ ಕಲ್ಯಾಣ್ಕರ್ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲಿಯೂ ಹೆಸರು ಮಾಡಿದ್ದರು. ನಿಧನರಾಗುವ ದಿನ ಬೆಳಗ್ಗೆ ಧಾರಾವಾಹಿ ಸೆಟ್ನಲ್ಲಿ ತಮ್ಮ 60 ನೇ ವರ್ಷದ ಹುಟ್ಟುಹಬ್ಬ ಕೂಡಾ ಆಚರಿಸಿಕೊಂಡಿದ್ದರು. ಸಿದ್ದರಾಜ್ ಅವರಿಗೂ ಮುನ್ನ ಆ ಧಾರಾವಾಹಿಯಲ್ಲಿ ಅದೇ ಪಾತ್ರ ನಿರ್ವಹಿಸುತ್ತಿದ್ದ ಹುಲಿವಾನ್ ಗಂಗಾಧರಯ್ಯ ಅವರು ಕೂಡಾ ಕೋವಿಡ್ - 19 ಕಾರಣದಿಂದ ಮೃತಪಟ್ಟಿದ್ದರು. ಧಾರಾವಾಹಿಯ ಸದಸ್ಯರು ಮಂಗಳವಾರ ಸೆಟ್ಗೆ ಬಂದಾಗ ಕಲ್ಯಾಣ್ಕರ್ ಅವರು ಇನ್ನಿಲ್ಲ ಎಂಬ ಕಹಿಸುದ್ದಿ ಕೇಳಿದಾಕ್ಷಣ ಶಾಕ್ ಆಗಿದ್ದಾರೆ.

ಆ ದಿನ ಕಲ್ಯಾಣ್ಕರ್ ಶೂಟಿಂಗ್ ಸೆಟ್ಗೆ ಬರುವಾಗ ಸ್ವಲ್ಪ ಆರೋಗ್ಯ ಸರಿ ಇರಲಿಲ್ಲವಾದ್ದರಿಂದ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದಿದ್ದರು. ಆದರೂ ನಮ್ಮೊಂದಿಗೆ ಶೂಟಿಂಗ್ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಮ್ಮ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಹುಲಿವಾನ್ ಗಂಗಾಧರಯ್ಯ ಹಾಗೂ ಸಿದ್ದರಾಜ್ ಕಲ್ಯಾಣ್ಕರ್ನಂತ ಇಬ್ಬರು ಹಿರಿಯ ಕಲಾವಿದರನ್ನು ಕಳೆದುಕೊಂಡಿರುವುದು ದುರಾದೃಷ್ಟಕರ. ನೀನಾಸಂನಲ್ಲಿ ತರಬೇತಿ ಪಡೆದಿದ್ದ ಸಿದ್ದರಾಜ್ ಹೊಸಬರಿಗೆ ತಮಗೆ ತಿಳಿದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಅವರು ಇನ್ನಿಲ್ಲ ಎಂಬ ವಿಚಾರ ಕೇಳಿ ಎಲ್ಲರಿಗೂ ಶಾಕ್ ಆಗಿದೆ ಎನ್ನುತ್ತಾರೆ ನಾಯಕಿ ಅಂಕಿತನವ್ಯಾ ಗೌಡ.

ಸಿದ್ದರಾಜ್ ಕಲ್ಯಾಣ್ಕರ್ ನಟಿಸುತ್ತಿದ್ದ ಪಾತ್ರಕ್ಕೆ ಧಾರಾವಾಹಿ ತಂಡ ಸೂಕ್ತ ಹಿರಿಯ ಕಲಾವಿದರನ್ನು ಹುಡುಕುತ್ತಿದ್ದು ಕೆಲವು ದಿನಗಳವರೆಗೂ ತಾತ್ಕಾಲಿಕವಾಗಿ ಶೂಟಿಂಗ್ ಸ್ಥಗಿತಗೊಳಿಸಿದೆ.
