ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕ ಸುಶಾಂತ್ ಆಗಿ ಅಭಿನಯಿಸುತ್ತಿರುವ ಪವನ್ ರವೀಂದ್ರ ಮಗದೊಮ್ಮೆ ತೆಲುಗು ಕಿರುತೆರೆಗೆ ಕಾಲಿಡಲಿದ್ದಾರೆ.
ಝೀ ತೆಲುಗಿನಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ವೈದೇಹಿ ಪರಿಣಯಂ'ನಲ್ಲಿ ನಾಯಕರಾಗಿ ನಟಿಸುವ ಮೂಲಕ ತೆಲುಗು ಕಿರುತೆರೆಯಲ್ಲಿ ಮಿಂಚಲಿದ್ದಾರೆ ಪವನ್ ರವೀಂದ್ರ.
ಈಗಾಗಲೇ ಮೌನರಾಗಂ ಅನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸಿರುವ ಪವನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. "ಜಾನಕಿ ರಾಘವ" ಧಾರಾವಾಹಿಯಲ್ಲಿ ರಾಘವನಾಗಿ ಕಾಣಿಸಿಕೊಳ್ಳವ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರವೀಂದ್ರ, ಮುಂದೆ "ಏಟು ಎದಿರೇಟು" ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ತದ ನಂತರ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ಆಗಿ ನಟಿಸಿ ವೀಕ್ಷಕರ ಮನ ಸೆಳೆದ ಪವನ್ ರವೀಂದ್ರ, ಇದೀಗ ಕಾವ್ಯಾಂಜಲಿಯ ಸುಶಾಂತ್ ಆಗಿ ಮೋಡಿ ಮಾಡುತ್ತಿದ್ದಾರೆ.
ಇನ್ನು, ವೈದೇಹಿ ಪರಿಣಯದ ಮೂಲಕ ಮತ್ತೆ ತೆಲುಗು ಕಿರುತೆರೆಯಲ್ಲಿ ಕಮಾಲ್ ಮಾಡಲಿರುವ ಹ್ಯಾಂಡ್ ಸಮ್ ಹುಡುಗ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಒಂದಾದ ಮೇಲೆ ಒಂದರಂತೆ ಅವಕಾಶ ಪಡೆಯುತ್ತಿದ್ದಾರೆ.