ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಪದ್ಮಾವತಿ' ಮರು ಪ್ರಸಾರ ಆರಂಭಿಸಿದೆ. 2017 ರಲ್ಲಿ ಆರಂಭವಾದ ಧಾರಾವಾಹಿ 3 ವರ್ಷಗಳ ಕಾಲ ಪ್ರಸಾರ ಕಂಡು 2019 ರಲ್ಲಿ ಮುಕ್ತಾಯಗೊಂಡಿತ್ತು. ಈ ಧಾರಾವಾಹಿಯನ್ನು ಜನರು ಬಹಳ ಮೆಚ್ಚಿದ್ದರು.

ಕೊರೊನಾ ಭೀತಿಯಿಂದಾಗಿ ಹೊಸ ಧಾರಾವಾಹಿಯಾಗಲೀ, ರಿಯಾಲಿಟಿ ಶೋಗಳನ್ನಾಗಲಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಬದಲಿಗೆ ಒಂದಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರ ಆರಂಭಿಸಿದರೆ ಮತ್ತೆ ಹಳೆಯ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ಅನಿವಾರ್ಯತೆ ಬಂದಿದೆ. ಕಲರ್ಸ್ ಸೂಪರ್ನಲ್ಲಿ ಈಗಾಗಲೇ ರಾಧಾ ರಮಣ, ಅಶ್ವಿನಿ ನಕ್ಷತ್ರ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ಇದೇ ಸೋಮವಾರದಿಂದ ಸಂಜೆ 6.30 ರಿಂದ ಮರು ಪ್ರಸಾರ ಆರಂಭಿಸಿರುವ 'ಪದ್ಮಾವತಿ' ಧಾರಾವಾಹಿ ಜನ್ಮಾಂತರದ ಕಥೆಯನ್ನು ಒಳಗೊಂಡಿದೆ.

ನಾಯಕಿ ತುಳಸಿ ದೈವ ಭಕ್ತೆ. ನಾಯಕ ಸಾಮ್ರಾಟ್ ಸಿನಿಮಾ ನಟ. ಹಳ್ಳಿ ಹುಡುಗಿ ತುಳಸಿಯ ಕನಸಲ್ಲಿ ಪ್ರತಿದಿನ ಸಾಮ್ರಾಟ್ ಬರುತ್ತಿರುತ್ತಾನೆ. ಆದರೆ ಆತನ ಮುಖವನ್ನು ಮಾತ್ರ ತುಳಸಿ ನೋಡಿರುವುದಿಲ್ಲ. ಒಂದು ದಿನ ಸಾಮ್ರಾಟ್ ಸಿನಿಮಾ ಚಿತ್ರೀಕರಣಕ್ಕಾಗಿ ತುಳಸಿಯ ಹಳ್ಳಿಗೆ ಬರುತ್ತಾನೆ. ಮದುವೆಯ ದೃಶ್ಯದ ಚಿತ್ರೀಕರಣಕ್ಕಾಗಿ ಅಭಿನಯಿಸಲು ಯಾವ ಹುಡುಗಿಯೂ ಇರುವುದಿಲ್ಲ. ಈ ಕಾರಣ ಪದ್ಮಾವತಿಯನ್ನು ಅಭಿನಯಿಸಲು ಕೇಳಿದಾಗ ಆಕೆ ಒಪ್ಪಿಕೊಳ್ಳುತ್ತಾಳೆ. ಸಾಮ್ರಾಟ್, ತುಳಸಿಯ ಕೊರಳಿಗೆ ತಾಳಿ ಕಟ್ಟುತ್ತಾನೆ.

ಶೂಟಿಂಗ್ ನಂತರ ಸಾಮ್ರಾಟ್ ತನ್ನ ಮನೆಗೆ ತೆರಳುತ್ತಾನೆ. ನಾಯಕಿ ತುಳಸಿ, ಸಾಮ್ರಾಟ್‌ನನ್ನು ಹುಡುಕಿಕೊಂಡು ಪೇಟೆಗೆ ಹೋಗುತ್ತಾಳೆ. ದೇವರನ್ನು ನಂಬಿಕೊಂಡು ಪೇಟೆಗೆ ಬಂದ ತುಳಸಿ ಆಶ್ಚರ್ಯ ಎಂಬಂತೆ ಸಾಮ್ರಾಟ್ ಮನೆ ಸೇರಿಕೊಳ್ಳುತ್ತಾಳೆ. ನಾಯಕ ಸಾಮ್ರಾಟ್‌ಗೆ ದೇವರನ್ನು ಕಂಡರೆ ಆಗುವುದಿಲ್ಲ, ಅವನ ಮನೆಯಲ್ಲಿ ತಾಯಿ-ತಂಗಿ ಕೂಡಾ ಪೂಜೆ ಮಾಡುವ ಹಾಗಿಲ್ಲ. ತುಳಸಿ ತನ್ನ ಮನೆಯಲ್ಲಿರೋದು ಸಾಮ್ರಾಟ್‌ಗೆ ಗೊತ್ತಿರುವುದಿಲ್ಲ. ಸಾಮ್ರಾಟ್ ಕಣ್ಣಿಗೆ ಕಾಣಿಸಿಕೊಳ್ಳದೆ ಅವನ ಸೇವೆ ಮಾಡುತ್ತಿರುವ ತುಳಸಿಯನ್ನು ಸಾಮ್ರಾಟ್ ಪ್ರೀತಿಸಲು ಆರಂಭಿಸುತ್ತಾನೆ.

ಒಟ್ಟಾರೆ ತುಳಸಿಯ ಆಗಮನದಿಂದಾಗಿ ಸಾಮ್ರಾಟ್ ಮನೆ-ಮನದಲ್ಲಿ ಹಲವು ಬದಲಾವಣೆ ಆಗುತ್ತದೆ. ನಂತರ ಸಾಮ್ರಾಟ್-ತುಳಸಿ ಮುಖಾಮುಖಿಯಾಗುತ್ತಾರೆ. ಈ ನಡುವೆ ಸಾಮ್ರಾಟ್ ಅಜ್ಜಿ ತನ್ನ ಮಂತ್ರ-ತಂತ್ರದಿಂದ ಇಬ್ಬರನ್ನೂ ದೂರ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ತುಳಸಿ ನಂಬಿದ ಪದ್ಮಾವತಿ ದೇವಿ ಆಕೆಗೆ ಸಹಾಯ ಮಾಡುತ್ತಾಳೆ. ಮುಂದೆ ಏನು ನಡೆಯುತ್ತದೆ ಎಂಬುದೇ ಸಸ್ಪೆನ್ಸ್.
ಧಾರಾವಾಹಿ ಮತ್ತೆ ಪ್ರಸಾರವಾಗುತ್ತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.