ನಂದಿನಿ, ಮನಸಾರೆ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿಯಲ್ಲಿ ಮತ್ತೆ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಯಾರಿವಳು ಹೆಸರಿನ ಹೊಸ ಧಾರಾವಾಹಿ ನೋಡಲು ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.
ಶ್ರೀಮಂತ ಮನೆತನಕ್ಕೆ ಸೇರಿದ ಶ್ರೇಷ್ಟ, ಸ್ವಂತ ಅಪ್ಪ ಅಮ್ಮನ ಪ್ರೀತಿ ವಂಚಿತವಾದ ಮಗು. ಇದಕ್ಕೆ ಕಾರಣ ಆಕೆಯ ಹೆಸರಿನಲ್ಲಿರುವ ಆಸ್ತಿ. ಬೇರೆ ಯಾರನ್ನೋ ಕರೆ ತಂದು ಈಕೆಯೇ ನಿನ್ನ ತಾಯಿ ಎಂದು ಶ್ರೇಷ್ಟ ಅಪ್ಪ ನಂಬಿಸಲು ಯತ್ನಿಸುತ್ತಾನೆ. ಇವರ ಈ ಕಿರುಕುಳದಲ್ಲಿ ಮೂಲೆ ಗುಂಪಾದ ಮತ್ತೊಬ್ಬ ವ್ಯಕ್ತಿ ಶ್ರೇಷ್ಟ ತಾತ ದೇವರಾಯ. ಶ್ರೇಷ್ಟಳ ಕಷ್ಟಕ್ಕೆ ಮಂಗಳಮುಖಿಯೊಬ್ಬರು ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ವಿಶೇಷ ಪಾತ್ರದೊಂದಿಗೆ ಪೋಷಕ ಪಾತ್ರಗಳಿಗೆ ಕೂಡಾ ಮಂಗಳಮುಖಿ ಸಮುದಾಯದ ಸದಸ್ಯರನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಇದೆಲ್ಲಾ ಒಂದೆಡೆ ಆದರೆ ಮತ್ತೊಂದೆಡೆ ಕಥಾನಾಯಕಿ ಮಾಯಾ, ಆಂಜನೇಯನ ಪರಮ ಭಕ್ತೆ. ಎಲ್ಲಾ ಕೆಲಸದಲ್ಲೂ ಭಜರಂಗಿಯನ್ನು ನೆನಯುವ ಇವಳು ಭಂಡ ಧೈರ್ಯದಿಂದ ಮುನ್ನುಗ್ಗುವ ಸ್ವಭಾವದವಳು. ಇವಳು ಮತ್ತು ಮಗು ಶ್ರೇಷ್ಟಳನ್ನು ಹೆತ್ತ ತಾಯಿ ಅಹಲ್ಯ ನೋಡಲು ಒಂದೇ ರೀತಿ ಇದ್ದು, ಇವರಿಬ್ಬರಿಗಿರುವ ಅವಿನಾಭಾವ ಸಂಬಂಧವನ್ನು ಕಥೆಯಲ್ಲಿ ಹೆಣೆಯಲಾಗಿದೆ. ಅಹಲ್ಯ ರೀತಿ ಇರುವ ಮಾಯಾ ಯಾರು? ಮಾಯಾ ಹಿಂದಿನ ಕಥೆಯೇನು? ಯಾರಿವಳು..? ಎಂಬ ಶೀರ್ಷಿಕೆಗೆ ಉತ್ತರ ಈ ಧಾರಾವಾಹಿಯ ಕಥೆಯಲ್ಲಿ ಅಡಗಿದೆ.
'ಬಾಹುಬಲಿ' ಸಿನಿಮಾ ಹಾಗೂ ಬಾಲಿವುಡ್ ಕ್ಷೇತ್ರದಲ್ಲಿ ಜನಪ್ರಿಯ ಹೈ ಬಜೆಟ್ ಧಾರಾವಾಹಿಗಳನ್ನು ಕೊಟ್ಟ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ, ಯಾರಿವಳು ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ದರ್ಶಿತ್ ಭಟ್ ನಿರ್ದೇಶಿಸುತ್ತಿದ್ದಾರೆ. ಧಾರಾವಾಹಿಗೆ ಮಂಡ್ಯ ಮಂಜು ಛಾಯಾಗ್ರಹಣವಿದೆ. ಕಥಾನಾಯಕಿ ಮಾಯಾ ಆಗಿ ಬ್ಯೂಟಿಫುಲ್ ಮನಸುಗಳು, ಕಮರೊಟ್ಟು ಚೆಕ್‍ಪೋಸ್ಟ್, ವೆನಿಲ್ಲಾ, ಕಟ್ಟುಕಥೆ ಸಿನಿಮಾಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಸ್ವಾತಿ ಕೊಂಡೆ ನಟಿಸುತ್ತಿದ್ದಾರೆ. ನಾಯಕ ನಿಖಿಲ್ ಪಾತ್ರವನ್ನು ನಂದಿನಿ ಧಾರಾವಾಹಿ ಖ್ಯಾತಿಯ ಆರವ್ ಸೂರ್ಯ ನಿರ್ವಹಿಸುತ್ತಿದ್ದು ಶ್ರೇಷ್ಟ ಪಾತ್ರವನ್ನು 'ಜಂಟಲ್ಮನ್' ಸಿನಿಮಾ ಖ್ಯಾತಿಯ ಬಾಲ ನಟಿ ಆರಾಧ್ಯ ನಿರ್ವಹಿಸುತ್ತಿದ್ದಾರೆ.
ಅಂಬರೀಶ್ ಸಾರಂಗಿ ಹಾಗೂ ಶರ್ಮಿತಾ ನೆಗೆಟಿವ್ ರೋಲ್ ನಿರ್ವಹಿಸುತ್ತಿದ್ದು, ಇವರೊಂದಿಗೆ ಹಿರಿಯ ಕಲಾವಿದ ಅಶೋಕ್ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್ ಹಾಗೂ ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ಇದ್ದಾರೆ. ಆಗಸ್ಟ್ 31ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ 'ಯಾರಿವಳು' ಪ್ರಾರಂಭವಾಗಲಿದೆ.