ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಮೃದುಲಾ ಆಗಿ ಅಭಿನಯಿಸುತ್ತಿದ್ದ ಅಮೃತಾ ರಾಮಮೂರ್ತಿ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದು, ಅದೇ ಕಾರಣದಿಂದ ಧಾರಾವಾಹಿಯ ನಿರ್ದೇಶಕರು ಮೃದುಲಾ ಪಾತ್ರವನ್ನು ಮುಕ್ತಾಯಗೊಳಿಸಿದ್ದರು. ಆಕ್ಸಿಡೆಂಟ್ನಲ್ಲಿ ಮೃದುಲಾ ಸಾಯುವ ಮೂಲಕ ಮೃದುಲಾ ಪಾತ್ರಕ್ಕೆ ಇತಿಶ್ರೀ ಹಾಡಿದರು. ಇದೀಗ 'ಕಸ್ತೂರಿ ನಿವಾಸ'ದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.
'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನವಾಗಿದೆ. ಮೃದುಲಾ ನನ್ನ ಜೀವ, ಪ್ರಾಣ ಎಂದು ನಂಬಿದ್ದ ರಾಘವ ಮಡದಿಯ ಸಾವಿನಿಂದಾಗಿ ಕಂಗೆಟ್ಟಿದ್ದಾನೆ. ಮುಂದೆ ತನ್ನ ಜೀವನ ಹೇಗೆ ಎಂಬ ಆಲೋಚನೆಯಲ್ಲಿರುವ ರಾಘನವ ಬಾಳಿನಲ್ಲಿ ಹೊಸ ಪಾತ್ರ ಹೇಗೆ ಆಗಮನವಾಗುತ್ತದೆ? ಹೊಸ ನಾಯಕಿ ರಾಘವನ ಮನ, ಮನೆ ತುಂಬುತ್ತಳಾ ಎಂಬುದಕ್ಕೆಲ್ಲಾ ಉತ್ತರ ಸಿಗಬೇಕಿದೆ. ಅಂದ ಹಾಗೇ 'ಕಸ್ತೂರಿ ನಿವಾಸ' ಹೊಸ ನಾಯಕಿಯಾಗಿ ಕಾಣಿಸಿಕೊಂಡಿರುವ ರಿಶಾ ನಿಜಗುಣ ಕೋಟೆ ನಾಡಿನ ಕುವರಿ. ಹೊಸ ಪಾತ್ರದ ಮೂಲಕ ಕಸ್ತೂರಿ ನಿವಾಸಕ್ಕೆ ಎಂಟ್ರಿ ಕೊಟ್ಟಿರುವ ರಿಶಾ ನಿಜಗುಣ ಕಿರುತೆರೆಗೆ ಹೊಸಬರೇನಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿ ಮೂಲಕ ರಿಶಾ ಕಿರುತೆರೆಗೆ ಬಂದರು. ಈಗ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತನ ತಂಗಿಯಾಗಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ವೀಕ್ಷಕರು ಕೂಡಾ ಬಿಗ್ಬಾಸ್ ಮನೆ ನೋಡುವ ಸುವರ್ಣಾವಕಾಶ ಇಲ್ಲಿದೆ ನೋಡಿ
ಅಪ್ಪ ಅಮ್ಮನ ಕನಸನ್ನು ನನಸು ಮಾಡಲು ಬೆಂಗಳೂರಿಗೆ ಬಂದ ರಿಶಾ, ಕಲಾತ್ಮಕ ಎನ್ನುವ ನಾಟಕ ತಂಡ ಸೇರಿದರು. ನಟನೆಯ ಆಗು ಹೋಗುಗಳನ್ನು ತಿಳಿದುಕೊಂಡರು. 'ಪ್ರಾರಬ್ಧ ಕರ್ಮ' ಹಾಗೂ 'ಗಡಿಯಂಕ ಕುಡಿಯುದ್ಧ' ಎಂಬ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈಕೆ 'ಡಿಕೆ ಬೋಸ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿದರು. ನಂತರ ಕಿರುತೆರೆಯಲ್ಲೂ ಅವಕಾಶ ಪಡೆದುಕೊಂಡ ಈಕೆ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾದರು. ಒಂದರ ಹಿಂದೊಂದು ಅವಕಾಶ ಗಳಿಸುತ್ತಿರುವ ರಿಶಾ ಅಪ್ಪ ಅಮ್ಮನ ಕನಸು ನನಸು ಮಾಡಿದ ಖುಷಿಯಲ್ಲಿದ್ದಾರೆ.