ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕಿ ಕಾವ್ಯ ಪಾತ್ರಧಾರಿ ಆಗಿ ನಟಿಸುತ್ತಿದ್ದ ಸುಷ್ಮಿತಾ ಭಟ್ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದು ಆ ಜಾಗಕ್ಕೆ ಬೇರೊಬ್ಬ ನಟಿಯ ಅಗಮನವಾಗಿದೆ. ಈಗಾಗಲೇ ಕಿರುತೆರೆಯಲ್ಲಿ ಛಾಪು ಮೂಡಿಸಿರುವ ಧಾರವಾಡದ ಬೆಡಗಿ ದೀಪಾ ಹಿರೇಮಠ್ ಇನ್ನು ಮುಂದೆ ಕಾವ್ಯ ಆಗಿ ವೀಕ್ಷಕರನ್ನು ರಂಜಿಸಲಿದ್ದಾರೆ.
ಈ ವಿಚಾರದ ಬಗ್ಗೆ ಸ್ವತಃ ದೀಪಾ ಹಿರೇಮಠ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. "ಬಹಳ ದಿನಗಳಿಂದ ಕನ್ನಡ ಪ್ರಾಜೆಕ್ಟ್ ಮಾಡುವಂತೆ ಜನರು ನನಗೆ ಹೇಳುತ್ತಿದ್ದರು. ಆದರೆ ನಾನು ತೆಲುಗು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ನನಗೆ ಕನ್ನಡ ಧಾರಾವಾಹಿ ಮಾಡಲಾಗಲಿಲ್ಲ. ಕೊರೊನಾ ವೈರಸ್ನಿಂದಾಗಿ ಲಾಕ್‌ಡೌನ್ ಶುರುವಾಯಿತು. ಆ ಸಮಯದಲ್ಲಿ ಆ ಧಾರಾವಾಹಿ ನಿಂತಿತು. ಆ ದಿನಗಳಲ್ಲಿ ನಾನು ಸಾಕಷ್ಟು ಸಮಸ್ಯೆ ಎದುರಿಸಿದೆ. ತಾಯಿಗೆ ಆರೋಗ್ಯ ಸಮಸ್ಯೆ ಕಾಡಿತು. ಮಾತ್ರವಲ್ಲ ಜೊತೆಗೆ ಅವರಿಗೆ ಆಪರೇಷನ್ ಕೂಡಾ ಆಯ್ತು. ಇದರ ನಡುವೆ ತಂದೆಗೂ ಕೊರೊನಾ ಪಾಸಿಟಿವ್ ಬಂತು. ಹಾಗಾಗಿ ನಾನು ಮನೆಯಲ್ಲಿ ಉಳಿಯಬೇಕಾಗಿ ಬಂತು. ಆದ್ದರಿಂದ ಯಾವುದೇ ಪ್ರಾಜೆಕ್ಟ್ ಮಾಡಲಾಗಲಿಲ್ಲ. ಈಗ ಎಲ್ಲವೂ ಒಳ್ಳೆಯದಾಗುತ್ತಿದೆ. ಈಗ ಹೊಸ ಪ್ರಾಜೆಕ್ಟ್ ಸಿಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮುಗಿಯಲಿದೆ ಕಿರುತೆರೆಯ ಖ್ಯಾತ ಧಾರಾವಾಹಿ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ದೀಪಾ ಹಿರೇಮಠ್ ಬ್ರಹ್ಮಾಸ್ತ್ರದ ನಂತರ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ನಟನಾ ಛಾಪು ಮೂಡಿಸಿದ್ದ ಈಕೆ ಬಹಳ ದಿನಗಳ ಗ್ಯಾಪ್ ನಂತರ ಕಿರುತೆರೆಯತ್ತ ಮರಳಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ದೀಪಾ ಹಿರೇಮಠ್, 'ವಾರಸ್ದಾರ' ಧಾರಾವಾಹಿಯಲ್ಲಿ ಪ್ರೀತಿ ಪಾತ್ರದಲ್ಲಿ ಕಾಣಿಸಿಕೊಂಡರು. 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ನಾಯಕಿ ಶಿವರಂಜಿನಿ ಆಗಿ ನಟಿಸಿದ್ದ ದೀಪಾ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಾಕೆ. ಕಾನೂನು ವ್ಯಾಸಂಗ ಮಾಡುತ್ತಿರುವ ದೀಪಾ ಬಾಲ್ಯದ ಕನಸು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ.