ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ಬಾರಮ್ಮ' ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡಿತು. ಈ ಧಾರಾವಾಹಿಯಲ್ಲಿ ಶ್ರುತಿ ಆಲಿಯಾಸ್ ಗೊಂಬೆಯಾಗಿ ನಟಿಸಿ ಮನೆ ಮಾತಾಗಿದ್ದ ನೇಹಾ ಗೌಡ ಇಂದಿಗೂ ಕಿರುತೆರೆ ವೀಕ್ಷಕರ ಪಾಲಿನ ಪ್ರೀತಿಯ ಗೊಂಬೆ ಆಗಿ ಉಳಿದಿದ್ದಾರೆ.
ಮುದ್ದು ಮುಖದ ಚೆಲುವೆ ನೇಹಾ ಗೌಡ ಮತ್ತೆ ನಟನಾ ಲೋಕಕ್ಕೆ ಮರಳಿದ್ದಾರೆ. ಮತ್ತೊಮ್ಮೆ ಕಿರುತೆರೆಯಲ್ಲಿ ಬಣ್ಣ ಹಚ್ಚಲಿದ್ದಾರೆ. ಅಂದ ಹಾಗೆ ನೇಹಾ ಗೌಡ ಅಭಿನಯಿಸುತ್ತಿರುವುದು ತಮಿಳು ಕಿರುತೆರೆಯಲ್ಲಿ. ತಮಿಳಿನಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ರೋಜಾ'ದಲ್ಲಿ ಅತಿಥಿ ಪಾತ್ರದಲ್ಲಿ ನೇಹಾ ಕಾಣಿಸಿಕೊಳ್ಳಲಿದ್ದಾರೆ.
'ರೋಜಾ'ದಲ್ಲಿ ನಾನು ಅತಿಥಿ ಪಾತ್ರದಲ್ಲಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದೇನೆ. ನನ್ನ ಪಾತ್ರದ ಹೆಸರು ನಿಶಾ. ನಾನು ಸುಮಾರು 10-15 ಎಪಿಸೋಡ್ಗಳಲ್ಲಿ ಅಭಿನಯಿಸಲಿದ್ದೇನೆ. ಒಂದರ್ಥದಲ್ಲಿ ಹೇಳಬೇಕೆಂದರೆ ಧಾರಾವಾಹಿಯ ಕಥೆಗೆ ನಿಶಾ ಪಾತ್ರ ತುಂಬಾ ಮುಖ್ಯವಾದುದು' ಎನ್ನುತ್ತಾರೆ ನೇಹಾ. ನಟನಾ ಲೋಕದಲ್ಲಿ ಕಳೆದ 7 ವರ್ಷಗಳಿಂದ ಬ್ಯುಸಿಯಾಗಿದ್ದ ಚೆಲುವೆ ಲಾಕ್ ಡೌನ್ನಿಂದಾಗಿ ಎರಡು ತಿಂಗಳು ಮನೆಯಲ್ಲೇ ಕೂರಬೇಕಾಯಿತು.
ಮತ್ತೆ ಯಾವಾಗ ಕೆಲಸ ಆರಂಭವಾಗುತ್ತದೆ, ಯಾವಾಗ ಮತ್ತೆ ಬಣ್ಣ ಹಚ್ಚುತ್ತೇನೆ ಎಂದು ಕಾತರದಿಂದ ಕಾಯುತ್ತಿದ್ದ ನೇಹಾ ಇದೀಗ ಫುಲ್ ಖುಷಿಯಾಗಿದ್ದಾರೆ. ಅದರಲ್ಲೂ ಶೂಟಿಂಗ್ ಆರಂಭವಾಗುವ ಹಿಂದಿನ ದಿನ ಮಧ್ಯರಾತ್ರಿಯೇ ಎದ್ದು ಶೂಟಿಂಗ್ನಲ್ಲಿ ಪಾಲ್ಲೊಳ್ಳುವ ತಯಾರಿಯಲ್ಲಿದ್ದರು. 'ರೋಜಾ' ಧಾರಾವಾಹಿ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ಸಾಕಷ್ಟು ಮುನ್ನೆಚರಿಕೆ ಕ್ರಮಗಳನ್ನು ನಾನು ಅನುಸರಿಸಿಸುತ್ತಿದ್ದೇನೆ. ನಾನು ಮಾತ್ರವಲ್ಲ ಶೂಟಿಂಗ್ ಜಾಗದಲ್ಲಿ ಕೂಡಾ ತಪಾಸಣೆ ಬಳಿಕವೇ ಒಳಗೆ ಬಿಡುತ್ತಾರೆ. ಎಲ್ಲಾ ಕಲಾವಿದರು ಮಾಸ್ಕ್ ಧರಿಸುತ್ತಾರೆ. ಸ್ಯಾನಿಟೈಸರ್ ಹಾಕಿಕೊಳ್ಳುತ್ತಾರೆ ಎನ್ನುತ್ತಾರೆ ನೇಹಾ.
ನೇಹಾಗೆ ಶೂಟಿಂಗ್ ಆರಂಭವಾಗಿರುವ ಖುಷಿ ಒಂದೆಡೆ ಆದರೆ ಮತ್ತೊಂದೆಡೆ ಕೊರೊನಾ ಭಯವಂತೆ. ಒಟ್ಟಿನಲ್ಲಿ ಭಯದಿಂದಲೇ ಎಲ್ಲಾ ರೀತಿಯ ಮುಂಗಾಗ್ರತಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದೇವೆ ಎನ್ನುತ್ತಾರೆ ಈ ಗೊಂಬೆ.