ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ-2 ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ತ್ರಿವಿಕ್ರಮ್ ತಮ್ಮ ನಟನೆಯ ಮೂಲಕ ಜನ ಮೆಚ್ಚುಗೆ ಪಡೆದಿದ್ದಾರೆ. ಇದೀಗ ಪರಭಾಷೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದು, ಫುಲ್ ಬ್ಯುಸಿಯಾಗಿದ್ದಾರೆ.
ತ್ರಿವಿಕ್ರಮ್ ಸಾಂಸ್ಕೃತಿಕ ನಗರಿಯ ಹ್ಯಾಂಡ್ಸಮ್ ಹುಡುಗ. ಹೆಸರು ನಾಗಾರ್ಜುನ್. ಶಾಲಾ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ನಾಗಾರ್ಜುನ್, ಬಿಎಎಸ್ಸಿ ಪದವೀಧರರಾಗಿದ್ದಾರೆ. ಡಿಗ್ರಿ ಮುಗಿಸಿದ ಬಳಿಕ ಬಣ್ಣದ ಲೋಕದತ್ತ ಮುಖ ಮಾಡಿದ ನಾಗಾರ್ಜುನ್ ಮೈಸೂರಿನಲ್ಲಿ ನಟನೆಗೆ ಸೇರಿದರು. ಅಲ್ಲಿ ನಟನೆಯ ರೀತಿ, ನೀತಿಗಳನ್ನು ಕಲಿತು ಮುಂದೆ ಒಂದಷ್ಟು ನಾಟಕಗಳಲ್ಲಿ ನಟಿಸಿದ್ದರು.
ಬಿ. ಸುರೇಶ್ ನಿರ್ದೇಶನದ ಮೃತ್ಯುಂಜಯ ನಾಟಕದಲ್ಲಿ ಮುಖ್ಯ ಪಾತ್ರ ಮಾಡಿದ್ದ ನಾಗಾರ್ಜುನ್ ಮುಂದೆ ಚಾಮಚೆಲುವೆ, ಸತ್ರೂ ಅಂದ್ರೆ ಸತ್ರು, ತಸ್ಕರ, ಧಾಂ ಧೂಂ ಸುಂಟರಗಾಳಿ ಸೇರಿದಂತೆ ಒಂದಷ್ಟು ನಾಟಕಗಳಲ್ಲಿ ನಟಿಸುವ ಮೂಲಕ ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ತದ ನಂತರ ಕಿರುತೆರೆಯತ್ತ ಮುಖ ಮಾಡಿದ ನಾಗಾರ್ಜುನ್ ಧಾರಾವಾಹಿಯ ಆಡಿಶನ್ಗೆ ಹೋಗುವ ನಿರ್ಧಾರ ಮಾಡಿದರು. ಮೊದಲ ಆಡಿಶನ್ನಲ್ಲಿಯೇ ಆಯ್ಕೆಯಾದ ಅವರು ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ಹಂಪಣ್ಣನಾಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿದರು. ಮೊದಲ ಧಾರಾವಾಹಿಯಲ್ಲಿ ಖಳನಾಯಕನಾಗಿ ಮೋಡಿ ಮಾಡಿದ್ದ ನಾಗಾರ್ಜುನ್ ಮುಂದೆ ಶಾಂತಂ ಪಾಪಂ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಮುಂದೆ ಅಗ್ನಿಸಾಕ್ಷಿಯಲ್ಲಿ ಕೌಶಿಕ್ ಹಾಗೂ ತೇಜಸ್ ಆಗಿ ಅಭಿನಯಿಸಿದ್ದರು. ಒಂದೇ ಧಾರಾವಾಹಿಯಲ್ಲಿ ಎರಡು ಹೆಸರಿನ ಪಾತ್ರದಲ್ಲಿ ನಟಿಸಿದ ನಾಗಾರ್ಜುನ್ ಏಕಕಾಲಕ್ಕೆ ಪಾಸಿಟಿವ್ ಮಾತ್ರವಲ್ಲದೆ ನೆಗೆಟಿವ್ ಪಾತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.
ತೆಲುಗಿನ ನಂತರ ತಮಿಳಿಗೆ ರಿಮೇಕ್ ಆಗಲಿದೆ 'ಕಸ್ತೂರಿ ನಿವಾಸ' ಧಾರಾವಾಹಿ
ಇದರ ಜೊತೆಗೆ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವ ನಾಗಾರ್ಜುನ್ ಅಲ್ಲೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ತೆಲುಗಿನ ಕಸ್ತೂರಿ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಇವರು ಇದೀಗ ನಾಗಿಣಿ-2 ರಲ್ಲಿ ನಾಯಕ ತ್ರಿವಿಕ್ರಮ್ ಆಗಿ ನಟಿಸುತ್ತಿದ್ದಾರೆ.