ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮ್ಜೀ ನಿರ್ದೇಶನದ ಜನಪ್ರಿಯ ಧಾರಾವಾಹಿ ನಾಗಿಣಿ -2 ಯಶಸ್ವಿಯಾಗಿ 50 ಸಂಚಿಕೆಗಳನ್ನು ಪೂರೈಸಿದೆ.
50 ಸಂಚಿಕೆಗಳನ್ನು ಪೂರೈಸಿದ ಸಂಭ್ರಮವನ್ನು ಶೂಟಿಂಗ್ ಸೆಟ್ನಲ್ಲಿ ಆಚರಿಸಿದ್ದಾರೆ. ಲಾಕ್ಡೌನ್ ಮುಗಿದ ನಂತರ ಶೂಟಿಂಗ್ ಆರಂಭವಾಗಿದ್ದು ಕಲಾವಿದರುಗಳು, ತಂತ್ರಜ್ಞರು ಕೆಲಸದ ಒತ್ತಡದಲ್ಲಿರುವುದು ಸಹಜ. ಈ ಬ್ಯುಸಿ ಶೆಡ್ಯೂಲ್ ನಡುವೆ ಶೂಟಿಂಗ್ ಸೆಟ್ನಲ್ಲಿ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಿದ್ದಾರೆ.
ನಾಗರಾಜ ಆದಿಶೇಷನ ಹತ್ಯೆ ಮತ್ತು ಕಳೆದು ಹೋಗಿರುವ ನಾಗಮಣಿಯನ್ನು ಮರಳಿ ಪಡೆಯುವುದಕ್ಕಾಗಿ ಭೂಲೋಕಕ್ಕೆ ಮಾನವ ರೂಪದಲ್ಲಿ ಬರುವ ನಾಗಿಣಿ ಶಿವಾನಿ ತನ್ನ ಆದಿಶೇಷನನ್ನು ಪಡೆಯುತ್ತಾಳಾ? ನಾಗಮಣಿಯ ರಹಸ್ಯ ಆಕೆಗೆ ತಿಳಿಯುತ್ತಾ ? ಸೇಡು ತೀರಿಸಿಕೊಳ್ಳುತ್ತಾಳಾ ಎಂಬ ಪ್ರಶ್ನೆಗಳಿಗೆ ಉತ್ತರ ಧಾರಾವಾಹಿಯ ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.
ಈಗಾಗಲೇ ಹಯವದನ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನಾಗಿಣಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಯಶಸ್ವಿಯಾಗಿ 1000 ಸಂಚಿಕೆಗಳನ್ನು ಪೂರೈಸಿತ್ತು. ಅದರಲ್ಲಿ ನಾಗಿಣಿ ಅಮೃತಾಳಾಗಿ ದೀಪಿಕಾ ದಾಸ್ ಮತ್ತು ನಾಯಕ ಅರ್ಜುನ್ ಆಗಿ ದೀಕ್ಷಿತ್ ಶೆಟ್ಟಿ ನಟಿಸಿದ್ದರು. ಇದೀಗ ನಾಗಿಣಿ 2 ಬಂದಿದ್ದು ಅದರಲ್ಲಿ ನಾಗಿಣಿ ಶಿವಾನಿ ಆಗಿ ನಮೃತಾ ಗೌಡ ನಟಿಸಿದ್ದಾರೆ. ಮಾತ್ರವಲ್ಲ, ನಾಗರಾಜ ಆದಿಶೇಷನಾಗಿ ಜಯರಾಂ ಕಾರ್ತಿಕ್ ಅಭಿನಯಿಸಿದ್ದಾರೆ.
ಇದರ ಜೊತೆಗೆ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಸೆಳೆದಿರುವ ನಾಗಿಣಿ-2 ಧಾರಾವಾಹಿ ಮಲಯಾಳಂ ಭಾಷೆಗೆ ಡಬ್ ಆಗುತ್ತಿದ್ದು ಜೀ ಕೇರಳಂ ಚಾನಲ್ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.