ರಂಗಭೂಮಿ, ಸಿನಿಮಾ, ಕಿರುತೆರೆ ಹಾಗೂ ರಾಜಕೀಯ, ಹೋರಾಟ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಇವತ್ತಿಗೂ ರಂಗಭೂಮಿ ನಂಟು ಹೊಂದಿರುವ ಚಂದ್ರು ಅವರು ಕಲಾ ಗಂಗೋತ್ರಿ ಕಲಾ ತಂಡದ 50ನೇ ಸುವರ್ಣ ವರ್ಷದ ಅಂಗವಾಗಿ ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ಪ್ರೇಕ್ಷಕರನ್ನು ನಕ್ಕು ನಲಿಸಲು ರೆಡಿಯಾಗಿದ್ದಾರೆ.
ರಂಗನಟ ಕೆ ಆರ್ ಶ್ರೀನಿವಾಸ್ ಮೇಷ್ಟ್ರು, ನಿರ್ದೇಶಕ ಡಾ. ಬಿ ವಿ ರಾಜಾರಾಂ ಜೊತೆಗೂಡಿ ಮುಖ್ಯಮಂತ್ರಿ ಚಂದ್ರು ಇದೇ ಏಪ್ರಿಲ್ 2ರಂದು 'ಜನಪ್ರಿಯ ಮುಖ್ಯಮಂತ್ರಿ' 3ರಂದು 'ಮೈಸೂರು ಮಲ್ಲಿಗೆ' ಹಾಗೂ 4 ರಂದು ಮತ್ತೆ 'ಹೊಸ ಮುಖ್ಯಮಂತ್ರಿ' ಎಂಬ ನಾಟಕವನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ.
ನಾಟಕದ ಹೈಲೆಟ್ಸ್ ಅಂದ್ರೆ, ನಮ್ಮ ದೇಶದಲ್ಲಿ ಕಳೆದ 75 ವರ್ಷಗಳಿಂದ ನಡೆದು ಬಂದ ರಾಜಕೀಯ ವ್ಯವಸ್ಥೆಯ ಮೇಲೆ 'ಮತ್ತೆ ಮುಖ್ಯಮಂತ್ರಿ' ಎಂಬ ಹೊಸ ನಾಟಕವನ್ನ ಆಡಲು ಸಜ್ಜಾಗಿದ್ದಾರೆ. ಇದರಲ್ಲಿ ರಾಜ್ಯದ ಸದ್ಯದ ರಾಜಕೀಯ ಹಾಗೂ ಸಿಡಿ ಪ್ರಕರಣ ಪ್ರಸಂಗಗಳನ್ನು ಈ ನಾಟಕದಲ್ಲಿ ತೋರಿಸುವ ಮೂಲಕ ವಿವಾದವನ್ನ ಎದುರಿಸಲು ರೆಡಿಯಾಗಿದ್ದಾರೆ.
ಇನ್ನು, 'ಹೊಸ ಮುಖ್ಯಮಂತ್ರಿ' ಹಾಗೂ 'ಮತ್ತೆ ಮುಖ್ಯಮಂತ್ರಿ' ನಾಟಕವನ್ನ ನಾಟಕಕಾರ ಕೆ ವೈ ನಾರಾಯಣಸ್ವಾಮಿ ರಚಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು 27ನೇ ವಯಸ್ಸಿನಿಂದಲೇ ಈ ನಾಟಕವನ್ನು ಮಾಡುತ್ತಿದ್ದಾರೆ.
'ಮುಖ್ಯಮಂತ್ರಿ' ನಾಟಕ ಇಂದಿಗೂ ಹೌಸ್ಫುಲ್ ಆಗುವ ಶಕ್ತಿ ಹೊಂದಿದೆ. ಆದರೆ, ಹೊಸ ಮುಖ್ಯಮಂತ್ರಿ ನಾಟಕ ಯಾವ ರೀತಿಯ ಪರಿಣಾಮ ಬೀರಲಿದೆ ಅನ್ನೋ ಕುತೂಹಲವೂ ಇದೆ.