'ಮುದ್ದುಲಕ್ಷ್ಮಿ' ಧಾರಾವಾಹಿಯ ನಾಯಕಿ ಲಕ್ಷ್ಮಿ ಆಗಿ ಮನೆ ಮಾತಾಗಿರುವ ನಟಿ ಅಶ್ವಿನಿ ಆಧ್ಯಾತ್ಮಿಕ ಪ್ರವಾಸ ಮಾಡಿ ಬಂದಿದ್ದಾರೆ. ಅಶ್ವಿನಿ ಬಿಡುವಿಲ್ಲದ ಶೂಟಿಂಗ್ ನಡುವೆಯೂ ಬಿಡುವು ಮಾಡಿಕೊಂಡು ಕೊಯಂಬತ್ತೂರಿನ ಇಶಾ ಫೌಂಡೇಶನ್ಗೆ ತೆರಳಿ ಸಮಯ ಕಳೆದು ಬಂದಿದ್ದಾರೆ. ಈ ಬಗ್ಗೆ ಅಶ್ವಿನಿ ತಮ್ಮ ಸೊಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನಗೆ ಪ್ರವಾಸ ಹೋಗುವುದೆಂದರೆ ಬಹಳ ಇಷ್ಟ. ಸಮಯ ದೊರೆತಾಗಲೆಲ್ಲಾ ಪ್ರವಾಸ ಹೋಗುವ ತಯಾರಿ ಮಾಡಿಕೊಳ್ಳುತ್ತೇನೆ. ನಾನು ಕಳೆದ ವರ್ಷ ಟ್ರಿಪ್ ಮಿಸ್ ಮಾಡಿಕೊಂಡಿದ್ದೆ. ಈ ವರ್ಷ ಹಲವು ಸ್ಥಳಗಳಿಗೆ ಹೋಗಬೇಕೆಂದುಕೊಂಡಿದ್ದೇನೆ. ಶೂಟಿಂಗ್ನಿಂದ ಬಿಡುವು ದೊರೆಯುವುದೇ ಕಷ್ಟ, ಸ್ವಲ್ಪ ಸಮಯ ದೊರೆತರೂ ಟ್ರಿಪ್ ತೆರಳಿ ಎಂಜಾಯ್ ಮಾಡಿ ಬರುತ್ತೇನೆ ಎನ್ನುವ ಅಶ್ವಿನಿ ಇತ್ತೀಚೆಗೆ ಕೇರಳದ ವಯನಾಡು ಹಾಗೂ ಊಟಿಗೆ ಕೂಡಾ ತೆರಳಿ ಬಂದಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ 15 ಮಿಲಿಯನ್ ಹಿಂಬಾಲಕರನ್ನು ಸಂಪಾದಿಸಿದ ಸಮಂತಾ
ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಬಣ್ಣದ ಪಯಣ ಆರಂಭಿಸಿದ ಅಶ್ವಿನಿ, ಅನುರಾಗ ಸಂಗಮ ಧಾರಾವಾಹಿಯ ಛಾಯಾ ಆಗಿ ನಟನಾ ಲೋಕಕ್ಕೆ ಬಂದರು. ನಂತರ ಕುಲವಧು ಧಾರಾವಾಹಿಯ ಶಶಿಕಲಾ ಎಂಬ ಪಾತ್ರದಲ್ಲಿ ನಟಿಸಿದರು. ಪೌರಾಣಿಕ ಧಾರಾವಾಹಿಯಲ್ಲಿ ಕೂಡಾ ನಟಿಸಿರುವ ಅಶ್ವಿನಿ ಈಗ ಮುದ್ದುಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ಆಗಿ ನಟಿಸುತ್ತಿದ್ದಾರೆ.