ಅಪ್ಪನ ಪ್ರೀತಿಗಾಗಿ ಹಂಬಲಿಸುವ ಮಗಳ ಕಥೆಯನ್ನೊಳಗೊಂಡ 'ಮನಸಾರೆ' ಧಾರಾವಾಹಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಉದಯ ವಾಹಿನಿಯಲ್ಲಿ ರವಿ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮನಸಾರೆ' ಧಾರಾವಾಹಿಯು ಉಳಿದ ಕಥೆಗಳಿಗೆ ಹೋಲಿಸಿದರೆ ಕೊಂಚ ವಿಭಿನ್ನವಾಗಿದೆ.
ಮಗಳು ಹುಟ್ಟಿದ ಕೂಡಲೇ ತಾನು ಮನಸಾರೆ ಪ್ರೀತಿಸುತ್ತಿದ್ದ ಪತ್ನಿ ಸಾವನಪ್ಪಿದಳಲ್ಲಾ ಎಂದು ಮಗಳನ್ನೇ ದ್ವೇಷಿಸುವ ತಂದೆ, ತಾನು ಹುಟ್ಟಿದ ದಿನದಿಂದಲೂ ದ್ವೇಷಿಸುತ್ತಿರುವ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳು, ಎಂದೂ ಮಲಮಗಳೆಂದು ಭಾವಿಸದೆ ಪ್ರೀತಿಯಿಂದ ನೋಡಿಕೊಳ್ಳುವ ಮಲತಾಯಿ, ಹೀಗೆ ವಿಭಿನ್ನ ಶೈಲಿಯ ಕಥಾಹಂದರವನ್ನು ಒಳಗೊಂಡಿರುವ 'ಮನಸಾರೆ' ಧಾರಾವಾಹಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಯಶಸ್ವಿ 50 ಸಂಚಿಕೆ ಪೂರೈಸಿರುವುದೇ ಸಾಕ್ಷಿ.
![Manasare serial completed 50 episodes](https://etvbharatimages.akamaized.net/etvbharat/prod-images/kn-bng-02-manasaare-50episode-vis-ka10018_02072020121518_0207f_1593672318_1006.jpg)
ವಿನೂತನ ಕಥಾ ಹಂದರದ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದಿರುವ 'ಮನಸಾರೆ' ಧಾರಾವಾಹಿಯಲ್ಲಿ ನಾಯಕಿ ಪಾರ್ಥನಾ ಆಗಿ ಹರಹರ ಮಹಾದೇವ ಪಾರ್ವತಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ನಟಿಸಿದ್ದರೆ, ನಾಯಕ ಯುವರಾಜ್ ಆಗಿ ಸಾಗರ್ ಬಿಳಿಗೌಡ ಅಭಿನಯಿಸಿದ್ದಾರೆ. ನಾಯಕಿ ತಂದೆ ಪಾತ್ರದಲ್ಲಿ ಸುನಿಲ್ ಪುರಾಣಿಕ್ ಅಭಿನಯಿಸುವ ಮೂಲಕ ಮತ್ತೆ ಕಿರುತೆರೆ ಜಗತ್ತಿಗೆ ಕಾಲಿಟ್ಟಿದ್ದಾರೆ.
ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಕಿರುತೆರೆಗೆ ಬಂದಿರುವ ಸುನಿಲ್ ಪುರಾಣಿಕ್ ಈ ಧಾರಾವಾಹಿಯಲ್ಲಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿಯ ತಾಯಿ ಪಾತ್ರದಲ್ಲಿ ಸ್ವಾತಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಹಿರಿತೆರೆ ನಟ ರಿಷಿ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು.
![Manasare serial completed 50 episodes](https://etvbharatimages.akamaized.net/etvbharat/prod-images/kn-bng-02-manasaare-50episode-vis-ka10018_02072020121518_0207f_1593672318_231.jpg)