ಟಾಕಿಂಗ್ ಸ್ಟಾರ್ ಬಿರುದಾಂಕಿತ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ 'ಮಜಾ ಟಾಕೀಸ್' ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿತ್ತು. ವಾರಾಂತ್ಯ ಬರುವುದನ್ನೇ ಕಾಯುತ್ತಿದ್ದ ಜನರು ಈ ಕಾರ್ಯಕ್ರಮದ ಮೂಲಕ ಸಖತ್ ಮನರಂಜನೆ ಪಡೆಯುತ್ತಿದ್ದರು. ಒಂದಲ್ಲ ಎರಡಲ್ಲ, ಬರೋಬ್ಬರಿ 5 ವರ್ಷಗಳ ಕಾಲ ಪ್ರಸಾರವಾಗಿದ್ದ 'ಮಜಾ ಟಾಕೀಸ್' ಯಶಸ್ವಿ ಎರಡು ಸೀಸನ್ಗಳನ್ನು ಪೂರೈಸಿ ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿತ್ತು.

ಹಿಂದಿಯ ಕಪಿಲ್ ಶರ್ಮಾ ಶೋ ನಂತೆ 'ಮಜಾ ಟಾಕೀಸ್' ಅನ್ನು ಸೃಷ್ಟಿಸಿದ್ದ ಸೃಜನ್ ಲೋಕೇಶ್, ಸಾವಿರಾರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇಂತಿಪ್ಪ 'ಮಜಾ ಟಾಕೀಸ್' ಕಳೆದ ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಂಡಾಗ ವೀಕ್ಷಕರಿಗೆ ಬೇಸರವಾಗಿತ್ತು. ಆದರೆ, ಇದೀಗ ಮತ್ತೆ ತಮ್ಮ 'ಮಜಾ ಟಾಕೀಸ್' ನ ಮೂಲಕ ಸೃಜನ್ ಲೋಕೇಶ್ ನಿಮ್ಮ ಮುಂದೆ ಬರಲಿದ್ದಾರೆ. ಹೌದು, 'ಮಜಾ ಟಾಕೀಸ್' ನ ಹೊಸ ಸೀಸನ್ಗಾಗಿ ಸೃಜನ್ ಲೋಕೇಶ್ ಸಕಲ ಸಿದ್ಧತೆ ಮಾಡುತ್ತಿದ್ದಾರೆ. ಮತ್ತೊಮ್ಮೆ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರ ಮನದಣಿಸಲು ಸೃಜನ್ ತಯಾರಾಗಿದ್ದಾರೆ.

ಈಗಾಗಲೇ ಶೂಟಿಂಗ್ ಆರಂಭಿಸಿರುವ ತಂಡ ಆದಷ್ಟು ಬೇಗನೇ ನಿಮ್ಮ ಮುಂದೆ ಬರಲಿದ್ದಾರೆ. ಅಂದ ಹಾಗೆ ಎಲ್ಲವೂ ಸರಿಯಾಗಿ ಸಾಗಿದ್ದರೆ ಈಗಾಗಲೇ 'ಮಜಾ ಟಾಕೀಸ್' ಪ್ರಸಾರ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

"ಮಜಾ ಟಾಕೀಸ್ ಮುಕ್ತಾಯವಾದ ಬಳಿಕ ನಾನು ಕೊಂಚ ಜಾಸ್ತಿಯೇ ಬ್ಯುಸಿಯಾದೆ. 'ಎಲ್ಲಿದ್ದೆ ಇಲ್ಲಿತನಕ' ಸಿನಿಮಾದ ಬಿಡುಗಡೆಯಲ್ಲಿ ಸಮಯ ಕಳೆಯಿತು. ಆದಾದ ಬಳಿಕ ಹೊಸ ರಿಯಾಲಿಟಿ ಶೋ ಮಾಡುವ ಅವಕಾಶ ದೊರೆಯಿತು. ಅದಕ್ಕಾಗಿ ನಾನು ನನ್ನ ಪ್ಲಾನ್ಗಳನ್ನು ಮುಂದೆ ಹಾಕಿದೆ. ಅಷ್ಟರಲ್ಲಿ ರಿಯಾಲಿಟಿ ಶೋ ಪ್ರಸಾರ ನಿಂತು ಹೋಯಿತು. ಅದೇ ಕಾರಣದಿಂದ ಮಜಾ ಟಾಕೀಸ್ ಹೊಸ ಸೀಸನ್ ಆರಂಭಿಸಲು ತಡವಾಯಿತು" ಎನ್ನುತ್ತಾರೆ ಮಾತಿನ ಮಲ್ಲ.

ಸೃಜನ್ ಲೋಕೇಶ್ ಅವರು 'ಮಜಾ ಟಾಕೀಸ್'ನ ಮುಖ್ಯ ಪಾತ್ರವಾಗಿದ್ದರೆ, ಸೃಜಾ ಪತ್ನಿ ರಾಣಿ ಆಗಿ ಶ್ವೇತಾ ಚಂಗಪ್ಪ ನಟಿಸಿದ್ದರು. ಆದರೆ, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ಶ್ವೇತಾ, ಈ ಬಾರಿ ಮಜಾ ಟಾಕೀಸ್ನಲ್ಲಿ ಬರುತ್ತಾರಾ ಅಥವಾ ಅವರ ಸ್ಥಾನದಲ್ಲಿ ಬೇರೆ ಯಾರಾದರೂ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ. ಉಳಿದಂತೆ ಅಚ್ಚ ಕನ್ನಡದ ನಿರೂಪಕಿ, ನಟಿ ಅಪರ್ಣಾ ಅವರು ಮೊದಲ ಬಾರಿಗೆ ಕಾಮಿಡಿ ಪಾತ್ರಕ್ಕೆ ಜೀವ ತುಂಬಿದ್ದರು. ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿಯಾಗಿ ಬದಲಾದ ಅಪರ್ಣಾ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
