ಕಲರ್ಸ್ ಕನ್ನಡ ವಾಹಿನಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಅಭಿಮಾನಿಗಳಿಗೆ ಬೇಸರದ ಸುದ್ದಿ ತಂದಿದೆ. ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಕೂಡಾ ಮುಂದಿನ ವಾರಾಂತ್ಯಕ್ಕೆ ತನ್ನ ಪ್ರಯಾಣ ನಿಲ್ಲಿಸಲಿದೆ.
ಟಿಆರ್ಪಿ ಕಡಿಮೆ ಬಂದಿರುವ ಕಾರಣ ಈ ವರ್ಷ ಆರಂಭವಾಗಿರುವ ಮೂರು ಧಾರಾವಾಹಿಗಳು ಅರ್ಧದಲ್ಲೇ ಪ್ರಸಾರ ನಿಲ್ಲಿಸಿರುವುದು ತಿಳಿದೇ ಇದೆ. ಇದರ ಜೊತೆ ಕಲರ್ಸ್ ಕನ್ನಡದಲ್ಲಿ ಕಳೆದ ಆರು ವರ್ಷಗಳಿಂದ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಮುಕ್ತಾಯಗೊಳ್ಳುವ ವಿಷಯ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಇದೀಗ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಕೂಡಾ ಕೊನೆಯ ಹಂತಕ್ಕೆ ಬಂದಿದ್ದು ಈ ಸುದ್ದಿ ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ.ಈ ಧಾರಾವಾಹಿ ಪ್ರತಿ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿತ್ತು. ಚಂದನ್, ಶೈನ್ಶೆಟ್ಟಿ, ನೇಹಾ ಗೌಡ, ರಶ್ಮಿ ಪ್ರಭಾಕರ್, ಕವಿತಾ ಗೌಡ, ಚಂದುಗೌಡ, ಸೌಮ್ಯಭಟ್ ಮುಂತಾದ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮುನ್ನ ಕವಿತಾ ಗೌಡ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿದ್ದರು. ನಂತರ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಈ ಸೀಸನ್ನಲ್ಲಿ ಮನೆಯಲ್ಲಿರುವ ಶೈನ್ ಶೆಟ್ಟಿ ಕೂಡಾ ಇದೇ ಧಾರಾವಾಹಿಯಲ್ಲಿ ಗುರುತಿಸಿಕೊಂಡಿರುವವರು. 6 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಇದೀಗ ಪ್ರಸಾರ ನಿಲ್ಲಿಸಲಿದ್ದು ಮುಂದಿನ ವಾರ ಅಂತಿಮ ಅಧ್ಯಾಯ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಯಶಸ್ವಿ ಎರಡು ಸಾವಿರ ಎಪಿಸೋಡ್ ಪೂರೈಸಿದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ತಂಡ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಸಂಭ್ರಮ ಆಚರಿಸಿತ್ತು.